ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ವಿವಾದ ಇದೀಗ ನ್ಯಾಯಾಲಯದ ಕಟಕಟೆಯೇರಿದೆ. ಯಾವುದೇ ರೀತಿಯ ನಿಯಮ ಪಾಲನೆ ಮಾಡದೇ ಅವೈಜ್ಞಾನಿಕವಾಗಿ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿರುವುದಾಗಿ ದೂರಿ ವಕೀಲ ಜಿ.ಆರ್.ಮೋಹನ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.
ಈ ರೀತಿ ಲೋಡ್ ಶೆಡ್ಡಿಂಗ್ ಮಾಡುವಾಗ ಕೇಂದ್ರ ವಿದ್ಯುಚ್ಛಕ್ತಿ ಕಾಯ್ದೆ-2003 ಹಾಗೂ ವಿದ್ಯುಚ್ಛಕ್ತಿ ನಿಯಮ-2005 ಪಾಲನೆ ಮಾಡಬೇಕು. ಆದರೆ ಇದನ್ನು ಸರ್ಕಾರ ಪಾಲನೆ ಮಾಡುತ್ತಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
ಈ ಕಾಯ್ದೆ ಹಾಗೂ ನಿಯಮಗಳ ಪ್ರಕಾರ ಕೊರತೆ ನೀಗಿಸಲು ಸರ್ಕಾರಗಳು ರಾಷ್ಟ್ರೀಯ ವಿದ್ಯುತ್ ನೀತಿ ಹಾಗೂ ಪ್ರಸರಣ ವ್ಯವಸ್ಥೆಯನ್ನೂ ರೂಪಿಸಬೇಕು. ಆದರೆ ಸರ್ಕಾರ ಆ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ. ಇದರಿಂದ ರಾಜ್ಯದ ಜನತೆ ವಿದ್ಯುತ್ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ. |