ಮಳೆಗಾಲದ ಆರಂಭದಿಂದಲೂ ವರುಣನ ಅವಕೃಪೆಯಿಂದಾಗಿ ಕಂಗಾಲಾಗಿದ್ದ ರೈತರು, ಇದೀಗ ಕರಾವಳಿಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ರೈತರಲ್ಲಿ ಸಂತಸ ಮೂಡಿಸಿದೆ.
ಬುಧವಾರದಿಂದ ಕರಾವಳಿ ಭಾಗದಲ್ಲಿ ಮುಂಗಾರು ಬಿರುಸುಗೊಂಡಿದ್ದು, ಆ ಮೂಲಕ ಕಳೆದ ಕೆಲವು ದಿನಗಳ ಬಿಸಿಲಿನಿಂದ ಮಳೆಗಾಲದ ವಾತಾವರಣಕ್ಕೆ ಮರಳಿದೆ.
ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಉಪ್ಪಿನಂಗಡಿ, ಬಜ್ಪೆ, ಮಂಗಳೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಜೂನ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿದ್ದ ಸರಾಸರಿ ಮಳೆ 410.50 ಮಿ.ಮೀ., ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಸರಾಸರಿ 952.10ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಅರ್ಧಕ್ಕರ್ಧ ಕುಸಿದಿದೆ.
ಬಹಳ ದಿನಗಳ ನಂತರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈವರೆಗೂ ಯಾವುದೇ ಮಳೆ ಹಾನಿ ವರದಿಯಾಗಿಲ್ಲ. |