ಕಾಂಗ್ರೆಸ್ ಕಾರ್ಯಕರ್ತರು ಇನ್ನು ಮುಂದೆ ವ್ಯಕ್ತಿ ಪೂಜೆ ಮಾಡುವುದನ್ನು ಬಿಟ್ಟು, ಪಕ್ಷ ಪೂಜೆ ಮಾಡುವತ್ತ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.ಅವರು ಬುಧವಾರ ಗದಗ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ವ್ಯಕ್ತಿ ಪೂಜೆ, ಗುಂಪುಗಾರಿಕೆ, ಭಿನ್ನಮತ, ದ್ವೇಷ, ಅಸೂಯೆ , ಜಾತಿ, ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಪಕ್ಷ ಜನರಿಂದ ದೂರವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.ಕಾಂಗ್ರೆಸ್ ಕಾರ್ಯಕರ್ತರ ಚಿಂತನೆ, ಸಂಕಲ್ಪ ನಿಲುವು, ಬಯಕೆ, ವಿಚಾರಗಳನ್ನು ಆಲಿಸಿ ಆ ನಿಟ್ಟಿನಲ್ಲಿ ಪಕ್ಷವನ್ನು ಕಟ್ಟಲು ಕೆಪಿಸಿಸಿ ಮುಂದಾಗಿದೆ. ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಲು ತಳಮಟ್ಟದಲ್ಲಿ ಕಾರ್ಯಕರ್ತರನ್ನು ರಕ್ಷಣೆ ಮಾಡುವ ಕಾರ್ಯತಂತ್ರವನ್ನು ರೂಪಿಸಿದೆ ಎಂದರು.ರಾಜ್ಯ ಕಾಂಗ್ರೆಸ್ ನಾಯಕರು ಮಾಡಿದ ತಪ್ಪುಗಳು ಕಾರ್ಯಕರ್ತರಲ್ಲಿ ನೋವನ್ನು ತಂದಿದೆ ಎಂಬುದನ್ನು ಎಲ್ಲ ನಾಯಕರು ಅರ್ಥ ಮಾಡಿಕೊಂಡಿದ್ದು ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವುದಾಗಿ ಎಲ್ಲಾ ನಾಯಕರು ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು. |