ಇಲ್ಲಿನ ಉದಯಗಿರಿ ಎಂಬಲ್ಲಿ ಮಸೀದಿ ಕಟ್ಟುವ ನಿವೇಶನಕ್ಕೆ ಸಂಬಂಧಿಸಿದಂತೆ ಕೋಮುಗಳ ನಡುವೆ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ ಇರಿತದಿಂದ ಇಬ್ಬರು, ಪೊಲೀಸ್ ಗೋಲಿಬಾರ್‌ಗೆ ಒಬ್ಬ ಬಲಿಯಾದ ಘಟನೆ ಗುರುವಾರ ನಡೆದಿದೆ.
ಗಾಯತ್ರಿಪುರಂನ 2ನೇ ಹಂತದಲ್ಲಿ ಈ ಹಿಂದೆ ಒಂದು ಮನೆ ಇದ್ದಿದ್ದು, ಆ ಮನೆಯ ಜಾಗದಲ್ಲಿ ಆಲಂ ಶಾಹೀದ್ ಟ್ರಸ್ಟ್‌ನವರು ಅರೇಬಿಕ್ ಶಾಲೆಯನ್ನು ನಡೆಸುತ್ತಿದ್ದರು. ಆ ಶಾಲೆ ಕಳೆದ ಒಂದು ವರ್ಷದ ಹಿಂದೆ ಮುಚ್ಚಿಹೋಗಿತ್ತು. ಆ ಜಾಗದಲ್ಲಿದ್ದ ಮನೆ ತೆರವು ಮಾಡಿ ಕಳೆದ ನಾಲ್ಕು ತಿಂಗಳ ಹಿಂದೆ ಆ ಜಾಗದ ಸುತ್ತ ತಡೆಗೋಡೆ ನಿರ್ಮಿಸಿ ಮಸೀದಿ ಕಟ್ಟಲು ಪಿಲ್ಲರ್‌ಗಳನ್ನು ಹಾಕಲಾಗಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಉಳಿಯಮ್ಮ ದೇವಸ್ಥಾನ ಟ್ರಸ್ಟ್‌ನವರು ಆ ನಿವೇಶನದಲ್ಲಿ ಮಸೀದಿ ಕಟ್ಟದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ ಇಂದು ಮುಂಜಾನೆ ಕಿಡಿಗೇಡಿಗಳು ಹಂದಿಯೊಂದನ್ನು ಕಡಿದು, ಮಸೀದಿ ಕಟ್ಟುತ್ತಿರುವ ಜಾಗದ ಮುಂಭಾಗದಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ಮುಸ್ಲಿಮರು ಗಲಾಟೆ ಆರಂಭಿಸಿದ್ದರು.
ಈ ವಿಷಯ ಉದಯಗಿರಿ ಪ್ರದೇಶದಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ಉದ್ನಿಗ್ನ ವಾತಾವರಣ ಏರ್ಪಟ್ಟಿತ್ತು. ಆ ಸಂದರ್ಭದಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಯಾಸಿರ್ (35)ನನ್ನು ಇರಿದು ಕೊಲ್ಲಲಾಯಿತು. ಇದಾದ ಕೆಲವು ಹೊತ್ತಿನಲ್ಲಿ ಕ್ಯಾತಮಾರನಹಳ್ಳಿಯ ಇಂದಿರಾಗಾಂಧಿ ರಸ್ತೆ ನಿವಾಸಿ ತಿರುಪತಿ (40ವ) ಎಂಬುವವನನ್ನು ಇರಿದು ಕೊಲೆ ಮಾಡಲಾಯಿತು. ಅಲ್ಲದೇ ಜುಬೈಯುಲ್ಲಾ(15ವ) ಘಟನೆಯಲ್ಲಿ ಬಲಿಯಾಗಿದ್ದಾನೆ..
ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರೂ ಕೂಡ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಣಿವಣ್ಣನ್ ಹೇಳಿದ್ದಾರೆ. |