ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ, ಎಲ್ಲೆಡೆ ಉತ್ತಮ ಮಳೆ, ಬೆಳೆಯಾಗಲಿ ಎಂಬ ನಿಟ್ಟಿನಲ್ಲಿ ಶುಕ್ರವಾರ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 34ಸಾವಿರ ದೇವಸ್ಥಾನಗಳಲ್ಲೂ ಪೂಜೆ ಕೈಂಕರ್ಯ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಮತ್ತು ಮಳೆಗಾಗಿ ಪ್ರಾರ್ಥಿಸಿ ರಾಜ್ಯದ 34ಸಾವಿರ ದೇವಸ್ಥಾನಗಳಲ್ಲೂ ಪ್ರತಿದಿನ ಕಡ್ಡಾಯವಾಗಿ ಬೆಳಿಗ್ಗೆ 6ರಿಂದ ಪೂಜಾ ಕಾರ್ಯ ಆರಂಭಿಸುವಂತೆ ಅರ್ಚಕರಿಗೆ ಸೂಚನೆ ನೀಡಲಾಗಿದೆ ಎಂದರು.ಕಷ್ಟಕಾಲ ಬಂದಾಗ ದೇವರ ಮೊರೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಇದೀಗ ರಾಜ್ಯದಲ್ಲಿ ಸಕಾಲದಲ್ಲಿ ಮುಂಗಾರು ಮಳೆ ಬಾರದಿರುವ ಹಿನ್ನೆಲೆಯಲ್ಲಿ ಬರದ ಛಾಯೆ, ವಿದ್ಯುತ್ ಸಮಸ್ಯೆ ತಲೆದೋರುವಂತಾಗಿದೆ. ಆ ನೆಲೆಯಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಲ್ಲೂ ಪೂಜಾ ಕೈಂಕರ್ಯ ನಡೆಸುವಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. |