ಜಲವಿವಾದದ ಸಂಬಂಧ ರಾಜ್ಯದ ಪರ ನ್ಯಾಯವಾದಿಗಳ ತಂಡದ ಮುಖ್ಯಸ್ಥ ಸುಪ್ರಿಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಅವರನ್ನು ಬದಲಾಯಿಸುವ ಪ್ರಸ್ತಾಪ ಸದ್ಯ ಸರ್ಕಾರದ ಮುಂದಿಲ್ಲ ಎಂದು ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಂತೆ ಆ ಸ್ಥಾನದಲ್ಲಿ ನಾರಿಮನ್ ಅವರೇ ಮುಂದುವರಿಯುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ಉದಯ ಹೊಳ್ಳ ಅವರು ಅಡ್ವೊಕೇಟ್ ಜನರಲ್ ಆಗಿದ್ದರು. ಹೀಗಾಗಿ ಕೃಷ್ಣ ಮತ್ತು ಕಾವೇರಿ ವಿವಾದ ಕುರಿತು ಕಾನೂನು ತಂಡದ ಸದಸ್ಯರಾಗಿದ್ದರು. ಇದೀಗ ಅವರು ಅಡ್ವೊಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಸದಸ್ಯರಾಗುವ ಹಂಬಲ ಇದೆಯೋ ಇಲ್ಲವೊ ಎಂಬ ಬಗ್ಗೆ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ತಂಡದ ಮುಖ್ಯಸ್ಥರಾಗಿ ನಾರಿಮನ್ ಅವರೇ ಮುಂದುವರಿಯುತ್ತಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಕ್ಷೀಣಿಸಿದ್ದರಿಂದ ಮೋಡ ಬಿತ್ತನೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇನ್ನೆರಡು ವಾರದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸಿ ಸರ್ಕಾರ ತನ್ನ ಮುಂದಿನ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿದರು. |