ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗುವುದಾದರೆ ರಾಷ್ಟ್ರವ್ಯಾಪಿ ಏಕರೂಪ ಶಿಕ್ಷಣ ಪದ್ಧತಿಯನ್ನು ವಿರೋಧಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಪದ್ಧತಿಯ ಕುರಿತಾದ ಸಾಧಕ ಭಾದಕಗಳನ್ನು ಚರ್ಚಿಸಿದ ಬಳಿಕ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಭೌಗೋಳಿಕ, ಸಾಮಾಜಿಕ ಸ್ಥಿತಿಗತಿ ಆಧರಿಸಿ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ತರುವುದು ಸೂಕ್ತ. ಹಾಗೆಯೇ ಇದನ್ನು ಜಾರಿಗೆ ತರುವ ಮುನ್ನ ಪ್ರಾಯೋಗಿಕವಾಗಿ ಚಿಂತನೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಪ್ರಸಕ್ತ ವರ್ಷ ಸರ್ಕಾರದ ನಿಯಮಾನುಸಾರ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಹಾಗೂ ಹೆಚ್ಚುವರಿ ಶಿಕ್ಷಕರ ನಿಯೋಜನೆ ಮಾಡಲಾಗಿದೆ. ಇದರಲ್ಲಿ ಕಾನೂನು ಉಲ್ಲಂಘಿಸಿ ವರ್ಗಾವಣೆ ಆಗಿದ್ದು ಕಂಡು ಬಂದರೆ ಅಂಥವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. |