ರಾಜ್ಯದಲ್ಲಿ ಮತ್ತೆ ಸಾರಾಯಿ ಹಾಗೂ ಲಾಟರಿ ಮಾರಾಟ ಜಾರಿಗೆ ತರುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಅಬಕಾರಿ ಮತ್ತು ವಾರ್ತಾ ಇಲಾಖೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ ಬದುಕಿಗೆ ಕಂಟಕವಾಗಿದ್ದ ಲಾಟರಿ ಮತ್ತು ಸಾರಾಯಿಯನ್ನು ನಿಷೇಧಿಸಲಾಗಿದೆ. ಸಚಿವ ಶಿವನಗೌಡ ಅವರು ಮತ್ತೆ ಲಾಟರಿ ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿರುವುದು ಅವರ ವೈಯಕ್ತಿಕ ಅಭಿಪ್ರಾಯ ವಿನ ಸರ್ಕಾರದ ತೀರ್ಮಾನವಲ್ಲ ಎಂದರು.
ಬಿಜೆಪಿ ರೆಸಾರ್ಟ್‌ನಲ್ಲಿ ಸಭೆ ನಡೆಸುತ್ತಿರುವ ಬಗ್ಗೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರು ಸಿಮ್ಲಾದಲ್ಲಿ ಮುಖ್ಯಮಂತ್ರಿಗಳ ಸಭೆಯನ್ನು ಹಾಗೂ ಹೋಟೆಲ್‌ನಲ್ಲಿ ಹಲವು ಬಾರಿ ನಡೆಸಿದ್ದರು. ಸಿಮ್ಲಾದ ಕುಲು-ಮನಾಲಿಯಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕೂಡ ಕಾಶ್ಮೀರದಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಸಿದ್ದನ್ನು ನೆನೆಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಅವಕಾಶ ಕಲ್ಪಿಸಿದರೆ ಅವರ ರೆಸಾರ್ಟ್‌ನಲ್ಲೇ ಮತ್ತೆ ಸಭೆ ನಡೆಸಲಾಗುವುದು ಎಂದು ಲೇವಡಿ ಮಾಡಿದರು. |