'ರಾಜ್ಯದ ವಿಧಾನಸೌಧ, ವಿಕಾಸಸೌಧ, ಮೆಜೆಸ್ಟಿಕ್ ಹಾಗೂ ಕೆ.ಆರ್.ಮಾರ್ಕೆಟ್ ಪ್ರದೇಶಗಳಲ್ಲಿ ಸ್ಫೋಟ ನಡೆಸುವ ಸಂಚು ರೂಪಿಸಲಾಗಿತ್ತು' ಎಂದು ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಸರ್ಫರಾಜ್ ಪೊಲೀಸರ ತನಿಖೆಯಲ್ಲಿ ಬಿಚ್ಚಿಟ್ಟ ಸ್ಫೋಟಕ ಸತ್ಯ ಇದಾಗಿದೆ.
2008 ಜುಲೈ 25ರಂದು ಉದ್ಯಾನಗರಿಯಲ್ಲಿ ಸರಣಿ ಸ್ಫೋಟ ಸಂಭವಿಸುವ ಮೂಲಕ ಉದ್ಯಾನನಗರಿಗರು ತಲ್ಲಣಿಸಿ ಹೋಗಿದ್ದರು. ಪೊಲೀಸರಿಗೆ ಸೆರೆ ಸಿಕ್ಕಿರುವ ಪ್ರಕರಣದ ಪ್ರಮುಖ ರೂವಾರಿ ಸರ್ಫರಾಜ್ ಇದೀಗ ಪೊಲೀಸ್ ತನಿಖೆಯಲ್ಲಿ, ವಿಧಾನಸೌಧ ಸೇರಿದಂತೆ ಪ್ರಮುಖ ಕಟ್ಟಡಗಳನ್ನು ಉಡಾಯಿಸುವ ಸಂಚು ರೂಪಿಸಲಾಗಿತ್ತು ಎಂದು ಬಾಯ್ಬಿಟ್ಟಿದ್ದಾನೆ.
ಬೆಂಗಳೂರು ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು 26ಆರೋಪಿಗಳ ವಿರುದ್ಧ ಎಸಿಸಿಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಮಡಿವಾಳ ಪ್ರಕರಣಕ್ಕೆ ಸಂಬಂಧಪಟ್ಟಂತೆ 718 ಪುಟ ಹಾಗೂ ಕೋರಮಂಗಲ ಪ್ರಕರಣಕ್ಕೆ ಸಂಬಂಧಿಸಿದಂತೆ 568ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ಕುರಿತಂತೆ 10ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ನಾಲ್ವರು ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದು, 12ಮಂದಿ ತಲೆಮರೆಸಿಕೊಂಡಿದ್ದಾರೆ. ಒಟ್ಟು 26ಮಂದಿಯಲ್ಲಿ ನಾಲ್ವರು ವಿದೇಶಿಯರು.
ಸರಣಿ ಸ್ಫೋಟ ಪ್ರಕರಣದಲ್ಲಿ ಸತ್ತಾರ್, ಸೈನುದ್ದೀನ್, ಸರ್ಫರಾಜ್ ನವಾಜ್, ಫೈಜ್, ಜಲೀಲ್, ಬದ್ರುದ್ದೀನ್, ಜಬ್ಬಾರ್, ಸಕಾರಿಯಾ, ಮುಜೀಬ್, ಮುನಾಫ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಪಾಕಿಸ್ತಾನದ ಇಬ್ಬರು, ಬಾಂಗ್ಲಾದೇಶದ ಒಬ್ಬ ಹಾಗೂ ಓಮನ್ ದೇಶದ ನಾಗರಿಕರು ಇನ್ನೂ ಸಿಗಬೇಕಿದೆ. ಅದರಂತೆ ಮತ್ತೊಬ್ಬ ಪ್ರಮುಖ ಆರೋಪಿ ನಾಸೀರ್ ತಲೆಮರೆಸಿಕೊಂಡಿದ್ದಾನೆ.
|