ಇನ್ನು ಮುಂದೆ ರಾಜ್ಯದಲ್ಲಿ ಕಡಿಮೆ ದರದ ಅತ್ಯುತ್ತಮ ಗುಣಮಟ್ಟದ ಮದ್ಯ ವಿತರಣೆ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಮದ್ಯದ ಅಂಗಡಿಗಳನ್ನು ತೆರೆಯುವ ಮಹತ್ವದ ತೀರ್ಮಾನ ಕೈಗೊಂಡಿರುವುದಾಗಿ ಅಬಕಾರಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ತಿಳಿಸಿದ್ದಾರೆ.ಈ ತೀರ್ಮಾನ ಶೀಘ್ರವೇ ಅನುಷ್ಠಾನಗೊಳ್ಳಲಿದ್ದು, ಸರ್ಕಾರದ ಅಂಗ ಸಂಸ್ಥೆಯಾಗಿರುವ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಮದ್ಯದಂಗಡಿಗಳನ್ನು ನಡೆಸಲಿದೆ. ಮೊದಲ ಹಂತದಲ್ಲಿ ರಾಜ್ಯಾದ್ಯಂತ 438 ಮದ್ಯದಂಗಡಿಗಳು ತಲೆ ಎತ್ತಲಿವೆ. ಈ ಪೈಕಿ ಸುಮಾರು 48ರಿಂದ 50 ಬೆಂಗಳೂರು ಮಹಾನಗರದಲ್ಲಿ, ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಮೂರು ಹಾಗೂ ತಾಲೂಕಿನಲ್ಲಿ ಎರಡು ಮದ್ಯದಂಗಡಿಗಳು ಆರಂಭಗೊಳ್ಳಲಿವೆ.ಮೊದಲ ಹಂತದಲ್ಲಿ ತೆರೆಯುವ ಮದ್ಯದಂಗಡಿಗಳು ಯಶಸ್ವಿಯಾಗಿ ನಡೆದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮದ್ಯದಂಗಡಿಗಳನ್ನು ತೆರೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ. ವೈನ್ ಶಾಪ್ ಮತ್ತು ಬಾರ್‌ಗಳ ಮಾಲೀಕರ ಬಲವಾದ ಲಾಬಿಯನ್ನ ಮಣಿಸುವುದೂ ಈ ಕ್ರಮದ ಹಿಂದಿರುವ ಮತ್ತೊಂದು ಕಾರಣ ಎನ್ನಲಾಗಿದೆ. |