ರಾಜ್ಯದಲ್ಲಿ ಶೀಘ್ರವೇ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗಲಿದೆ. ಈ ಸಂಬಂಧ ಮುಂಬರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಹಾಲಿ ಇರುವ ಕಾಯ್ದೆಯನ್ನು ಪುನಾರೂಪಿಸಿ ಜಾರಿಗೊಳಿಸಿ ಅನುವಾಗುವಂತೆ ಮಸೂದೆಯೊಂದನ್ನು ಮಂಡಿಸಲು ಸರ್ಕಾರ ಸಿದ್ಥತೆ ನಡೆಸಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ಸಂಬಂಧ ರಾಜ್ಯದಲ್ಲಿ 1964ರ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ಕಾಯ್ದೆ ಜಾರಿಯಲ್ಲಿದೆ. ಆದರೆ, ಈ ಕಾಯ್ದೆಯಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಗೋಹತ್ಯೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಗುತ್ತಿಲ್ಲ. ಹೀಗಾಗಿ ಈ ಕಾಯ್ದೆಯನ್ನು ಪುನಾರೂಪಿಸಿ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದ್ದು, ಜುಲೈ 9ರಿಂದ ಆರಂಭವಾಗುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತ ಮಸೂದೆ ಮಂಡಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಗೋಹತ್ಯೆ ಸಂಪೂರ್ಣ ನಿಷೇಧ ಮಾಡುವುದು ಸಂವಿಧಾನದ ಆಶಯವೂ ಆಗಿದೆ. ಸಂವಿಧಾನದ ಪರಿಚ್ಛೇದ 46ರಲ್ಲಿ ಗೋಹತ್ಯೆ ನಿಷೇಧಿಸಬೇಕು ಎಂದು ಸಂವಿಧಾನ ನಿರೂಪಕರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅದರಂತೆ ರಾಜ್ಯದಲ್ಲೂ 1964ರಲ್ಲೆ ಈ ಸಂಬಂಧ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.
ದೇಶದ 9ರಾಜ್ಯಗಳಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಜಾರಿಯಲ್ಲಿದೆ. ಸಂವಿಧಾನದ ಪರಿಚ್ಛೇದ 46ರಲ್ಲಿ ಕೃಷಿ ಬಳಕೆಯ ಜಾನುವಾರು ಹಾಗೂ ಹಾಲು ನೀಡುವ ಗೋವಿನ ಸಂರಕ್ಷಣೆ ಮಾಡಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದನ್ನು ಜಾರಿಗೆ ತರುವುದಷ್ಟೇ ರಾಜ್ಯ ಸರ್ಕಾರದ ಉದ್ದೇಶ ಎಂದು ಆಚಾರ್ಯ ಹೇಳಿದರು. |