ಟಿವಿ ವಾಹಿನಿಗಳಲ್ಲಿ ಡಬ್ಬಿಂಗ್ ಆದ ಜಾಹಿರಾತುಗಳನ್ನು ಸಂಪೂರ್ಣ ನಿಷೇಧಿಸಬೇಕೆಂದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಆಗ್ರಹಿಸಿದೆ.
ಈಗಾಗಲೇ ಸಿನಿಮಾ ಮತ್ತು ಧಾರವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಬಾರದೆಂಬ ಕಾನೂನು ಚಾಲ್ತಿಯಲ್ಲಿವೆ. ಇದೇ ಮಾನದಂಡ ಹಾಗೂ ತರ್ಕವನ್ನು ಜಾಹೀರಾತುಗಳಿಗೂ ಅನ್ವಯಿಸಬೇಕು ಎಂದು ಸಂಘದ ನಿರ್ದೇಶಕ ಎಸ್. ವಿ. ರಾಜೇಂದ್ರಬಾಬು ಆಗ್ರಹಿಸಿದ್ದಾರೆ.
ಕನ್ನಡ ಚಿತ್ರೋದ್ಯಮ ಮತ್ತು ಟಿವಿ ಮಾಧ್ಯಮ ತಾಂತ್ರಿಕವಾಗಿ ಸಾಕಷ್ಟು ಬೆಳೆದಿದೆ. ಇಲ್ಲಿಯ, ಕಲಾವಿದರು, ತಂತ್ರಜ್ಞರು ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ತಯಾರಿಸಿದರೆ ನೂರಾರು ಕೋಟಿ ಬಂಡವಾಳಗಳನ್ನು ಹೂಡಬಹುದು. ಇದರಿಂದ ಜನತೆಗೆ ಉದ್ಯೋಗ ಸಿಗುತ್ತದೆ ಎಂದು ಅವರ ಅಭಿಪ್ರಾಯ.
ಈ ಬಗ್ಗೆ ಕರ್ನಾಟಕದ ಎಲ್ಲಾ ವಾಹಿನಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಅನುವಾದಿತ ಜಾಹೀರಾತುಗಳ ಪ್ರಸಾರವನ್ನು ಕೂಡಲೇ ನಿಲ್ಲಿಸಿ ಇಲ್ಲಿಯೇ ನಮ್ಮವರಿಂದಲೇ ತಯಾರಿಸಿ ಪ್ರಸಾರ ಮಾಡುವುದರ ಮೂಲಕ ಇಲ್ಲಿಯ ನೂರಾರು ಕಲಾವಿದರು, ತಂತ್ರಜ್ಞರಿಗೆ ಕೆಲಸ ಒದಗಿಸಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ. |