ಮಂಗಳೂರಿನ ಪಬ್ ಮೇಲೆ ಶ್ರೀರಾಮಸೇನೆ ದಾಳಿ ನಡೆಸುವ ಮೂಲಕ ದೇಶಾದ್ಯಂತ ವಿವಾದ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರನ್ನು ತಾಲಿಬಾನ್ ಎಂದು ಕರೆದ ಮಾಜಿ ಕೇಂದ್ರ ಸಚಿವೆ ರೇಣುಕಾ ಚೌಧರಿ ವಿರುದ್ಧ ದಾಖಲಾದ ಪ್ರಕರಣಕ್ಕೆ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಸೂಕ್ತ ಸಾಕ್ಷ್ಯಾಧಾರದ ಕೊರತೆ ಎಂದು 'ಬಿ' ವರದಿ ಸಲ್ಲಿಸಿದ್ದಾರೆ.ಪ್ರಕರಣದ ತನಿಖಾಧಿಕಾರಿ ಕಂಕನಾಡಿ ಎಸ್‌ಐ ಪ್ರಕಾಶ್, 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ, ಈ ಪ್ರಕರಣದ ತನಿಖೆಗೆ ಸಾಕ್ಷ್ಯಾಧಾರದ ಕೊರತೆ ಇದೆ ಎಂದು ಬಿ ವರದಿಯನ್ನು ಸಲ್ಲಿಸಿದ್ದಾರೆ.ರೇಣುಕಾ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಗಣೇಶ್ ಹೊಸಬೆಟ್ಟು ಫೆ.21ರಂದು ಸಾರ್ವಜನಿಕರ ಪರವಾಗಿ ಮಂಗಳೂರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ನ್ಯಾಯಾಲಯವು ದೂರು ದಾಖಲಿಸುವಂತೆ ಕಂಕನಾಡಿ ಪೊಲೀಸರಿಗೆ ಆದೇಶಿಸಿತ್ತು. ಈ ಪೊಲೀಸರು ಬಿ ವರದಿ ಸಲ್ಲಿಸಿದ್ದು, ವಿಚಾರಣೆಯನ್ನು ಜು.14ಕ್ಕೆ ಮುಂದೂಡಲಾಗಿದೆ. ಪೊಲೀಸರ ಈ ಕ್ರಮದಿಂದಾಗಿ ರೇಣುಕಾ ಪ್ರಕರಣ ಇನ್ನು ನ್ಯಾಯಾಲಯದ ಅಂಗಳದಲ್ಲಿದೆ. |