ನಗರದಲ್ಲಿನ ಹೋಟೆಲ್ ಉದ್ಯಮಗಳನ್ನು ಮಧ್ಯರಾತ್ರಿ 12ಗಂಟೆಗೆ ಮುಚ್ಚುವಂತೆ ಕಳೆದ ಮೇ 19ರಂದು ನಗರ ಪೊಲೀಸ್ ಕಮೀಷನರ್ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಶುಕ್ರವಾರ ಊರ್ಜಿತಗೊಳಿಸಿದೆ.
1963ರ ರಾಜ್ಯ ಪೊಲೀಸ್ ಕಾಯ್ದೆಯ 31(ಡಬ್ಲ್ಯು) ಕಲಂ ಅಡಿ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಮಾತ್ರ ಹೋಟೆಲ್‌ಗಳನ್ನು ತೆರೆದಿಡಬೇಕು ಎನ್ನುವ ನಿಯಮದ ಅನುಸಾರ ಸುತ್ತೋಲೆ ಹೊರಡಿಸಲಾಗಿದ್ದು, ಅದು ಸರಿ ಇದೆ ಎಂದು ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಹೋಟೆಲ್ ಮುಚ್ಚಲು ಇನ್ನೂ ಹೆಚ್ಚಿನ ಹೆಚ್ಚಿನ ಸಮಯ ನೀಡುವಂತೆ ಕೋರಿ ಎಂಪೈರ್ ಹೋಟೆಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾಗೊಳಿಸಿದ್ದಾರೆ.
ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗಬಾರದೇ ಇರಲು ಕಮಿಷನರ್ ಈ ಸುತ್ತೋಲೆ ಹೊರಡಿಸಿರುವುದಾಗಿ ಅಡ್ವೊಕೇಟ್ ಜನರಲ್ ಅಶೋಕ ಹಾರ್ನಳ್ಳಿ ತಿಳಿಸಿದ್ದಾರೆ. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದರು.
ಇಂದು ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿದೆ. ಇಂಥ ಸಂದರ್ಭದಲ್ಲಿ ಹೆಚ್ಚಿನ ಅವಧಿಯವರೆಗೆ ಹೋಟೆಲ್‌ಗಳು ತೆರೆದಿದ್ದರೆ ಶಾಂತಿಗೆ ಭಂಗ ತರುವ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಮೀಷನರ್ ಆದೇಶದಲ್ಲಿ ಯಾವುದೇ ರೀತಿಯ ಲೋಪ ಇಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು. |