ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಲಿಬರ್ಹಾನ್ ಆಯೋಗ ಕೇಂದ್ರಕ್ಕೆ ಸಲ್ಲಿಸಿರುವ ವರದಿ ಬಗ್ಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಲಿಬರ್ಹಾನ್ ಆಯೋಗವು ಸಂಪೂರ್ಣ ಮಾಹಿತಿ ಪಡೆಯದೇ ವರದಿ ಸಿದ್ಧಪಡಿಸಿದೆ. ಜೊತೆಗೆ ವರದಿ ಪೂರ್ಣವಾದ ಸತ್ಯವನ್ನು ಹೇಳುತ್ತಿಲ್ಲ ಎಂದು ಅವರು ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ಅಯೋಧ್ಯೆಯಲ್ಲಿ ಮಸೀದಿ ಒಡೆಯುತ್ತಿದ್ದ ಘಟನೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇದಕ್ಕೂ ಹಿಂದಿನ ದಿನ ನಡೆದ ಗುಪ್ತ ಸಭೆಯಲ್ಲೂ ಪಾಲ್ಗೊಂಡಿದ್ದೆವು. ಆದರೆ ಸಭೆಯಲ್ಲಿ ಮಸೀದಿ ಒಡೆಯುವ ಬಗ್ಗೆ ಯಾವುದೇ ಪ್ರಸ್ತಾಪ ಬಂದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಅಲ್ಲದೆ, ಆ ಬಳಿಕ ದೇಶದೆಲ್ಲೆಡೆಯಿಂದ ಬಂದಿದ್ದ ಕರಸೇವಕರು ಹೋಮ, ಭಜನೆಯಷ್ಟೇ ಮಾಡಿದ್ದರು. ನಾನು ಅದನ್ನು ಗಮನಿಸಿದ್ದೆ. ಆದರೆ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಯಿತು. ಕಣ್ಣ ಮುಂದೆ ನಡೆಯುತ್ತಿದ್ದ ಘಟನೆಯನ್ನು ತಡೆಯಲು ಪ್ರಯತ್ನ ಪಟ್ಟವರಲ್ಲಿ ನಾನು ಒಬ್ಬನಾಗಿದ್ದೆ. ಆದರೆ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ವಿಫಲವಾಗಿದ್ದೆವು ಎಂದು ಅವರು ವಿವರಿಸಿದರು.ಇಷ್ಟೆಲ್ಲಾ ನಡೆದರೂ ಲಿಬರ್ಹಾನ್ ಒಮ್ಮೆಯೂ ತಮ್ಮನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿಲ್ಲ. ಘಟನೆಯನ್ನು ಕಣ್ಣಾರೆ ಕಂಡವರ ಅಭಿಪ್ರಾಯವನ್ನೇ ಪಡೆಯದೆ ವರದಿ ಪೂರ್ಣಗೊಳಿಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. |