ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಮುಜರಾಯಿ ಸಚಿವ ವಿ. ಸೋಮಣ್ಣ ಅವರ ಅಬ್ಬರಕ್ಕೆ ಬಿಬಿಎಂಪಿಯ ಸಹಾಯಕ ಇಂಜಿನಿಯರ್ ಒಬ್ಬರು ಆಘಾತಕ್ಕೆ ಒಳಗಾಗಿ ಪ್ರಜ್ಞಾಹೀನರಾಗಿದ್ದಾರೆ.
ಸಚಿವರು ತಾವು ಪ್ರತಿನಿಧಿಸುವ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಗ್ರಹಾರ ದಾಸರಹಳ್ಳಿಯ ಕೈಗಾರಿಕೆ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಂದಿನಂತೆ ಅಧಿಕಾರಿಗಳತ್ತ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರ ಅಬ್ಬರವನ್ನು ತಾಳಲಾರದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ಸಹಾಯಕ ಎಂಜಿನಿಯರ್ ಸೋಮರಾಜ್ ಪ್ರಜ್ಞಾಹೀನರಾಗಿದ್ದಾರೆ.
ತಕ್ಷಣವೇ ಅವರನ್ನು ಸ್ಥಳೀಯ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಯಿತು. ಆ ಸಂದರ್ಭದಲ್ಲಿ "ನನ್ನದೇನೂ ತಪ್ಪಿಲ್ಲ. ನಮಗ್ಯಾಕೆ ಬೈತೀರಿ ಸಾರ್. ನಮ್ಮ ಮನೆಯವರಿಗೆಲ್ಲಾ ಯಾಕೆ ಬೈತೀರಾ..." ಎಂದು ಬಡಬಡಿಸಿದ ಅವರು, ಬಳಿಕ ಮಲ್ಯ ಆಸ್ಪತ್ರೆಯ ದಾರಿಯಲ್ಲಿ ಮಾತು ನಿಲ್ಲಿಸಿದರು. ಅಲ್ಲಿಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸೋಮಣ್ಣ, ಕೆಲಸಗಳಾಗಿದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿರುವುದು ನಿಜ. ಆದರೆ ಯಾವುದೇ ಅವಾಚ್ಯ ಶಬ್ದಗಳನ್ನು ಉಪಯೋಗಿಸಿಲ್ಲ ಎಂದು ತಿಳಿಸಿದ್ದಾರೆ. ಇದೀಗ ಸೋಮರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
|