ಕೇರಳ ಜೆಡಿಎಸ್ ಘಟಕದ ಅಧ್ಯಕ್ಷ ವೀರೇಂದ್ರ ಕುಮಾರ್ ಅವರನ್ನು ಭಾನುವಾರ ಉಚ್ಚಾಟಿಸುವ ಮೂಲಕ ಜೆಡಿಎಸ್ ಘಟಕದಲ್ಲಿ ಸ್ಫೋಟಿಸಿದ ಬಂಡಾಯ ತಾರ್ಕಿಕ ಅಂತ್ಯ ಮುಟ್ಟಿದೆ. ದೆಹಲಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ವೀರೇಂದ್ರ ಕುಮಾರ್ ಅವರನ್ನು ಉಚ್ಚಾಟಿಸುವ ನಿರ್ಧಾರವನ್ನು ಪ್ರಕಟಿಸಿದರು.
ಪಕ್ಷದ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿ ಬಂಡಾಯ ಸಾರಿದ್ದಕ್ಕಾಗಿ ಅವರನ್ನು ಉಚ್ಚಾಟಿಸಲಾಗಿದೆಯೆಂದು ದೇವೇಗೌಡರು ತಿಳಿಸಿದರು. ಜೆಡಿಎಸ್ ಕೇರಳ ಘಟಕವನ್ನು ಉಚ್ಚಾಟಿಸಿರುವ ದೇವೇಗೌಡರು ಅದರ ಬದಲಿಗೆ ನೂತನ ಘಟಕವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.
ಕೇರಳ ಘಟಕದ ನೂತನ ಅಧ್ಯಕ್ಷರನ್ನಾಗಿ ಎನ್.ಎಂ.ಜೋಸೆಫ್ ಅವರನ್ನು ನೇಮಿಸಲಾಗಿದ್ದು, ಉಪಾಧ್ಯಕ್ಷರನ್ನಾಗಿ ರಾಮಚಂದ್ರ ಕುರುಪ್ ಮತ್ತು ಜಾನ್ ಕುಟ್ಟಿ ಅವರನ್ನು ನೇಮಿಸಲಾಗಿದೆ. ಜೆಡಿಎಸ್ ಕೇರಳದ ಎಡಪಕ್ಷದ ಜತೆ ಮೈತ್ರಿಗೆ ವೀರೇಂದ್ರ ಕುಮಾರ್ ವಿರೋಧ ವ್ಯಕ್ತಪಡಿಸಿದ್ದರಿಂದ ಭಿನ್ನಾಭಿಪ್ರಾಯ ಸ್ಫೋಟಿಸಿ ಕೆಲವು ದಿನಗಳಿಂದ ನಡೆದ ಮುಸುಕಿನ ಗುದ್ದಾಟ ವೀರೇಂದ್ರ ಕುಮಾರ್ ಉಚ್ಚಾಟನೆಯಲ್ಲಿ ಮುಕ್ತಾಯ ಕಂಡಿದೆ. |