ರೈಲ್ವೆ ಇಲಾಖೆಯ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಸರಿಪಡಿಸದೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪರೀಕ್ಷಾ ಕೇಂದ್ರಕ್ಕೆ ದಾಳಿ ಮಾಡಿ ದಾಂಧಲೆ ನಡೆಸಿದರು.
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟಿಕೆಟ್ ಕಲೆಕ್ಟರ್ ಹಾಗೂ ಕಮರ್ಷಿಯಲ್ ಕ್ಲರ್ಕ್ ಹುದ್ದೆಗಳಿಗೆ ನಡೆಯುತ್ತಿದ್ದ ಪರೀಕ್ಷೆ ಕುರಿತು ಮಾಹಿತಿ ಪಡೆದ ಕರವೇ ಕಾರ್ಯಕರ್ತರು ಏಕಾಏಕಿ ನುಗ್ಗಿ ಪರೀಕ್ಷಾ ಕೇಂದ್ರದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದರು.
ನಗರದ ಕಮಲಾಬಾಯಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ನುಗ್ಗಿದ ಪ್ರತಿಭಟನಾಕಾರರು ರಸಾಯನಶಾಸ್ತ್ರದ ಪ್ರಯೋಗಾಲಯ, ಗಾಜು, ಕುರ್ಚಿಗಳನ್ನು ಜಖಂಗೊಳಿಸಿದ್ದಾರೆ.
ಮೈಸೂರು ವರದಿ: ಮೈಸೂರಿನ ಪರೀಕ್ಷಾ ಕೇಂದ್ರಕ್ಕೆ ನುಗ್ಗಿದ್ದ ಕರವೇ ಕಾರ್ಯಕರ್ತರು ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಯನ್ನು ಹರಿದು ಹಾಕಿ ಪೀಠೋಪಕರಣವನ್ನು ಧ್ವಂಸ ಮಾಡಿದ್ದಾರೆ. ಇಲ್ಲಿ ನಡೆದ ಪರೀಕ್ಷೆಯಲ್ಲಿ ಬರೆಯುತ್ತಿದ್ದ 338 ಅಭ್ಯರ್ಥಿಗಳ ಪೈಕಿ 350 ಅಭ್ಯರ್ಥಿಗಳು ಕರ್ನಾಟಕದವರಲ್ಲ ಎಂಬುದು ಕಾರ್ಯಕರ್ತರ ಆರೋಪವಾಗಿದೆ.
ಪ್ರತಿಭಟನೆಯಿಂದ ರೈಲ್ವೆ ಇಲಾಖೆಯ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರೀಕ್ಷೆ ವಂಚಿತರಾದ ಅಭ್ಯರ್ಥಿಗಳಿಗೆ ಜುಲೈ 12ರಂದು ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವಕಾಶವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
|