ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉದ್ಬವವಾಗುವುದಕ್ಕೆ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವೇ ಪ್ರಮುಖ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ ಆರೋಪಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಯಾವ ಪ್ರಮಾಣದ ನೀರನ್ನು ಉಪಯೋಗಿಸಬೇಕಿತ್ತೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲಾಗಿದೆ. ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಇದಕ್ಕೆ ಸರ್ಕಾರ ಪರ್ಯಾಯ ಕ್ರಮಗಳನ್ನು ಕೈಗೊತ್ತಿಲ್ಲ ಎಂದು ಕಿಡಿಕಾರಿದರು.ಇದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಸಂಪುಟದ ಸಚಿವರಿಗೆ ಅನುಭವದ ಕೊರತೆ ಎದ್ದು ಕಾಣುತ್ತಿದೆ ಎಂದು ಅವರು ಟೀಕಿಸಿದ್ದಾರೆ.ಅಲ್ಲದೆ, ಜನರ ವಿಶ್ವಾಸದಿಂದ ಸರ್ಕಾರ ದೂರ ಸರಿದಿದೆ. ಎಲ್ಲೆಲ್ಲಿ ವಿರೋಧ ಪಕ್ಷದ ಶಾಸಕರು ಇದ್ದಾರೋ ಆ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಅವರು ದೂರಿದ್ದಾರೆ. |