ಉಲ್ಲಾಳ ಹಾಗೂ ಇತರ ಕರಾವಳಿ ತೀರಗಳ ಕಡಲ್ಕೊರೆತ ತಡೆಯಲು ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕ್ ಸಹಯೋಗದೊಂದಿಗೆ 280 ಕೋಟಿ ರೂಪಾಯಿ ನೂತನ ಪ್ರಸ್ತಾವನೆಯನ್ನು ಕೇಂದ್ರಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಬಂದರು ಖಾತೆ ಸಚಿವ ಜೆ.ಕೃಷ್ಣ ಪಾಲೇಮಾರ್ ಹೇಳಿದ್ದಾರೆ.
ಶಾಶ್ವತ ತಡೆಗೋಡೆ ನಿರ್ಮಾಣ ಕುರಿತಂತೆ, ಜುಲೈ 10 ರಂದು ತಾಂತ್ರಿತ ತಜ್ಞರ ಸಭೆ ನಡೆಯಲಿದ್ದು, ನಂತರ ನೂತನ ಪ್ರಸ್ತಾವನೆಯನ್ನು ಕೇಂದ್ರ ಸರಕಾರದ ಮಂಜೂರಾತಿಗಾಗಿ ಕಳುಹಿಸಿಕೊಡುವುದಾಗಿ ಪಾಲೇಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇಂದ್ರ ಸರಕಾರ ಶೇ.80 ರಷ್ಟು ವೆಚ್ಚವನ್ನು ಭರಿಸಲಿದ್ದು, ರಾಜ್ಯಸರಕಾರ ಶೇ.20 ರಷ್ಟು ವೆಚ್ಚವನ್ನು ಭರಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಡಲ್ಕೊರೆತದಿಂದ ಶಾಶ್ವತ ಪರಿಹಾರಕ್ಕಾಗಿ ನೀಲಿನಕ್ಷೆ ಸಿದ್ಧವಾಗಿದ್ದು, ಉಲ್ಲಾಳಕ್ಕೆ 216 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುವುದು ಉಳಿದ ಹಣವನ್ನು ಇತರ ಕರಾವಳಿ ತೀರಗಳಿಗೆ ವ್ಯಯ ಮಾಡಲಾಗುವುದು ಎಂದು ಸಚಿವ ಪಾಲೇಮಾರ್ ಹೇಳಿದ್ದಾರೆ.
ಉಲ್ಲಾಳ ಕಡಲ್ಕೊರೆತ ತಡೆ ಪರಿಹಾರಕ್ಕೆ ತಾತ್ಕಾಲಿಕವಾಗಿ ಎರಡು ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಗಂಜಿ ಕೇಂದ್ರ ಹಾಗೂ ಸಮುದ್ರದ ಹತ್ತಿರದಲ್ಲಿ ವಾಸಿಸುವ ಜನತೆಗೆ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಉಲ್ಲಾಳ ಕರಾವಳಿ ತೀರವನ್ನು ಕರಾವಳಿ ರಕ್ಷಣಾ ಯೋಜನೆಯಡಿಯಲ್ಲಿ ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕ್ ಗುರುತಿಸಿದೆ ಎಂದು ಉಲ್ಲಾಳ ಶಾಸಕ ಯು. ಟಿ.ಖಾದರ್ ಹೇಳಿದ್ದಾರೆ.
ಸಚಿವ ಕೃಷ್ಣ ಪಾಲೇಮಾರ್ , ಉಲ್ಲಾಳ ಶಾಸಕ ಖಾದರ್ ಅವರುಗಳು ಮುಕ್ಕಚೇರಿ ,ಕೋಟೆಪುರಾ ಮೊಗವೀರ್ ಪಟ್ಟಣ ಕರಾವಳಿ ತೀರಪ್ರದೇಶಗಳಿಗೆ ಭೇಟಿ ನೀಡಿ ಕಡಲ್ಕೊರೆತದಿಂದಾದ ಹಾನಿಯನ್ನು ವೀಕ್ಷಿಸಿ ಸರಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.
|