ಪ್ರಾಥಮಿಕ ಶಾಲೆಗಳಲ್ಲಿ ಬೋಧನಾ ಮಾಧ್ಯಮದ ಕುರಿತ ನ್ಯಾಯಾಲಯದ ಆದೇಶವನ್ನು ಪಾಲಿಸಲು ಮತ್ತಷ್ಟು ಸಮಯಾವಕಾಶ ನೀಡುವಂತೆ ಕರ್ನಾಟಕ ಸರಕಾರವು ರಾಜ್ಯ ಹೈಕೋರ್ಟ್‌ಗೆ ಮನವಿ ಮಾಡಲಿದೆ ಎಂದು ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡಿರುವ ಕುರಿತ ರಾಜ್ಯ ಸರಕಾರದ ಆದೇಶವನ್ನು ತಳ್ಳಿ ಹಾಕಿರುವ ಹೈಕೋರ್ಟು, ಬೋಧನಾ ಮಾಧ್ಯಮದ ಕುರಿತ ತನ್ನ ಆದೇಶವನ್ನು ಜುಲೈ 8ರೊಳಗೆ ಅನುಷ್ಠಾನಗೊಳಿಸುವಂತೆ ಹೈಕೋರ್ಟು ರಾಜ್ಯ ಸರಕಾರಕ್ಕೆ ಸೂಚಿಸಿತ್ತು ಎಂದು ಹೇಳಿದರು.
ಸುಮಾರು 1000 ಖಾಸಗಿ ಶಾಲೆಗಳನ್ನೊಳಗೊಂಡ ಕರ್ನಾಟಕ ಸಂಯುಕ್ತ ಶಾಲೆಗಳ ಆಡಳಿತಮಂಡಳಿಗಳ ಒಕ್ಕೂಟ (ಕುಸ್ಮಾ)ವು ರಾಜ್ಯ ಸರಕಾರದ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಯ ವಿಚಾರಣೆ ಸಂದರ್ಭ ಹೈಕೋರ್ಟ್ ಈ ಆದೇಶ ನೀಡಿತ್ತು.
ಜುಲೈ 21ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ಸರಕಾರವು ಹೈಕೋರ್ಟಿಗೆ ಮನವಿ ಮಾಡಲಿದೆ. ಸುಪ್ರೀಂ ಕೋರ್ಟಿನಲ್ಲಿಯೂ ಇದೇ ರೀತಿಯ ವಿವಾದವೊಂದು ಅಂದು ವಿಚಾರಣೆ ನಡೆಯಲಿರುವುದರಿಂದ ಈ ಮನವಿ ಮಾಡಿಕೊಳ್ಳಲಾಗಿದೆ ಎಂದು ಕಾಗೇರಿ ಹೇಳಿದರು. |