ಬೆಂಗಳೂರು: ಮೈಸೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಪೊಲೀಸರೇ ಕಾರಣ ಎಂದು ದೂಷಿಸಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಮದ್ರಸಕ್ಕೆ ನೀಡುತ್ತಿದ್ದ ರಕ್ಷಣೆಯನ್ನು ಜುಲೈ 1ರಂದು ಪೊಲೀಸರು ಹಿಂತೆಗೆದುಕೊಂಡಾಗಲೇ ಸಮಸ್ಯೆ ಉಲ್ಬಣಿಸಿತು ಎಂದು ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತಪ್ಪಿತಸ್ಥರು ಯಾರೇ ಆಗಿದ್ದರೂ, ಅವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರಲ್ಲದೆ, ರಾಜ್ಯದ ಬಿಜೆಪಿ ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಬಿಜೆಪಿ ಸರಕಾರ ಇದೆ, ಆದರೆ ನಿಷ್ಕ್ರಿಯವಾಗಿದೆ. ಅದಕ್ಕೆ ಆಡಳಿತಕ್ಕಿಂತಲೂ 'ಆಪರೇಶನ್ ಕಮಲ' ಮುಖ್ಯವಾಗಿದೆ ಎಂದೂ ದೇಶಪಾಂಡೆ ಕಿಡಿ ಕಾರಿದರು. |