ಗ್ರಾಮೀಣ ಪ್ರದೇಶಕ್ಕೆ ಒತ್ತು, ಬಡವರಿಗೆ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿರುವ ಕೇಂದ್ರದ ಬಜೆಟ್ ಉದ್ಯಮ ರಂಗಕ್ಕೆ ಯಾವುದೇ ರೀತಿಯಲ್ಲೂ ನೆರವಾಗಲಿಲ್ಲ ಎಂಬ ಕಾರಣಕ್ಕೆ ಸೆನ್ಸೆಕ್ಸ್ ಪಾತಾಳ ಕಂಡಿದ್ದರೂ, ಐಟಿ ಉದ್ಯಮ ವಲಯದ ಕಡೆಯಿಂದ ಉತ್ತಮ ಅಭಿಪ್ರಾಯವೇ ವ್ಯಕ್ತವಾಗಿದೆ. ಐಟಿ ಉದ್ಯಮ ಪ್ರಮುಖರ ಅಭಿಪ್ರಾಯ ಈ ರೀತಿ ಇವೆ:
ಜನರಲ್ ಮೋಟಾರ್ಸ್ (ಇಂಡಿಯಾ) ಅಧ್ಯಕ್ಷ, ಎಂಡಿ ಕಾರ್ಲ್ ಸ್ಲಿಮ್: ಬಜೆಟ್ ಆಟೋಮೊಬೈಲ್ ಉದ್ಯಮದ 'ಕೆಲವೊಂದು' ಸಮಸ್ಯೆಗಳಿಗೆ ಪರಿಹಾರ ನೀಡಿದೆ, ನಿರೀಕ್ಷಿತವಾಗಿಲ್ಲ. ಇದು ಉದ್ಯಮದ ಬೇಡಿಕೆಗೆ ಹಾಗೂ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಬೇಕು. ಮೂಲಸೌಕರ್ಯ, ಶಿಕ್ಷಣ, ಕೃಷಿ, ನೀರಾವರಿ, ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ಬೆಳಕು ಚೆಲ್ಲಿರುವ ಇದು ಪ್ರೋತ್ಸಾಹದಾಯಕ.
ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಎ.ಶಕ್ತಿವೇಲು: ಫ್ರಿಂಜ್ ಬೆನೆಫಿಟ್ ಟ್ಯಾಕ್ಸ್, ತೆರಿಗೆ ರಜಾದಿನಗಳ ವಿಸ್ತರಣೆ ಇತ್ಯಾದಿಗಳಿಂದ ರಫ್ತು ವಲಯದಲ್ಲಿ ಸ್ಪರ್ಧಾತ್ಮಕತೆಗೆ ಉತ್ತೇಜನ ದೊರೆತಂತಾಗುತ್ತದೆ. ಸರಕು ಸಾಗಾಟ ಸೇವೆಗಳು ಹಾಗೂ ವಿದೇಶೀ ಏಜೆಂಟರ ಕಮಿಶನ್‌ಗಳಿಗೆ ಸೇವಾ ತೆರಿಗೆ ರಿಯಾಯಿತಿ ನೀಡಿರುವುದಕ್ಕೆ ಸರಕಾರಕ್ಕೆ ಅಭಿನಂದನೆಗಳು.
ವಿಪ್ರೋ ಕಾರ್ಯಕಾರಿ ನಿರ್ದೇಶಕ ಮತ್ತು ಸಿಎಫ್ಒ ಸುರೇಶ್ ಸೇನಾಪತಿ: ಬಜೆಟ್ ಮಹತ್ವಾಕಾಂಕ್ಷೆಯುಳ್ಳದ್ದು ಮತ್ತು ಕಾರ್ಯಯೋಗ್ಯವಾದುದು. ಐಟಿ ಉದ್ಯಮದ ನಿಟ್ಟಿನಲ್ಲಿ ಹೇಳುವುದಾದರೆ, ಎಸ್‌ಟಿಪಿಐ ವಿಸ್ತರಿಸಿರುವುದು ಸ್ವಾಗತಾರ್ಹ. ಫ್ರಿಂಜ್ ಬೆನೆಫಿಟ್ ಟ್ಯಾಕ್ಸ್ ರದ್ದು ಮಾಡಿರುವುದು ಸಂತಸದಾಯಕ. ಆರೋಗ್ಯ ವಿಮೆ, ಶಿಕ್ಷಣ, ಮೂಲಸೌಕರ್ಯ ಮತ್ತು ಗ್ರಾಮೀಣಾಭಿವೃದ್ಧಿ ಮೂಲಕ ರಾಷ್ಟ್ರ ನಿರ್ಮಾಣದ ಮೂಲಭೂತ ಉದ್ದೇಶಗಳತ್ತ ಈ ಬಜೆಟ್ ಬೆಳಕು ಚೆಲ್ಲಿದೆ.
ನಾಸ್ಕಾಂ ಅಧ್ಯಕ್ಷ ಸೋಮ್ ಮಿತ್ತಲ್: ಸಮಗ್ರ ಪ್ರಗತಿಯ ವರ್ಧನೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ- ಈ ಎರಡು ಉಭಯ ಉದ್ದೇಶಗಳನ್ನು ಈ ಬಜೆಟ್ ಸಾಧಿಸಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಐಟಿ-ಬಿಪಿಒ ಉದ್ಯಮದ ಕೊಡುಗೆಯನ್ನು ಬಜೆಟ್ ಪರಿಗಣಿಸಿದೆ ಮತ್ತು ಈ ವಲಯದ ಉತ್ತೇಜನಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.
ಇನ್ಫೋಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ: ಹೆಚ್ಚು ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ವಿತ್ತ ಸಚಿವರು ಯಾವುದೇ ಘೋಷಣೆಗಳನ್ನು ಮಾಡದೆ ಅಸಮಾಧಾನ ಮೂಡಿಸಿದ್ದಾರೆ. ಆರ್ಥಿಕ ಸಮಗ್ರತೆಯು ಅತ್ಯಗತ್ಯ, ಆದರೆ ಬಂಡವಾಳ ಆಕರ್ಷಿಸುವುದು ಕೂಡ ಅಷ್ಟೇ ಅಗತ್ಯ.
ಇನ್ಫೋಸಿಸ್ ಸಿಇಒ ಮತ್ತು ಆಡಳಿತ ನಿರ್ದೇಶಕ ಎಸ್.ಗೋಪಾಲಕೃಷ್ಣನ್: 10ಎ/10ಬಿ ತೆರಿಗೆ ವಿನಾಯಿತಿಯನ್ನು ಒಂದು ವರ್ಷ ವಿಸ್ತರಿಸಿರುವುದು ಐಟಿ ಉದ್ಯಮಕ್ಕೆ ನೌಜ ಲಾಭಕ್ಕಿಂತಲೂ ಭಾವನಾತ್ಮಕವಾಗಿ ಮಹತ್ವದ ಕ್ರಮ. ಯಾಕೆಂದರೆ ಯಾಕೆಂದರೆ ಹೆಚ್ಚಿನ ಎಸ್‌ಟಿಪಿಗಳು ತೆರಿಗೆ ರಜಾದಿನಗಳಿಂದ ಈಗಾಗಲೇ ಹೊರಗೆಬಂದಿವೆ. |