ಕರ್ನಾಟಕ ಕರಾವಳಿ ಪ್ರದೇಶಗಳಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ಸೋಮವಾರ ವಸತಿ ಪ್ರದೇಶಗಳು ಮತ್ತು ಬತ್ತದ ಗದ್ದೆಗಳು ಜಲಾವೃತವಾಗಿವೆ. ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಬೆಳ್ತಂಗಡಿ ತಾಲೂಕಿನಲ್ಲಿ ಶಾಲೆಗಳಿಗೆ ಬುಧವಾರ ಕೂಡ ರಜೆ ಘೋಷಿಸಲಾಗಿದೆಯೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಾಮೇಗೌಡ ತಿಳಿಸಿದ್ದಾರೆ.
ಕಳೆದ ಮುಂಗಾರಿನಲ್ಲಿ ಉಳೈಬೆಟ್ಟುನಲ್ಲಿ ಬಸ್ ಅಪಘಾತದಿಂದ 11 ಮಕ್ಕಳು ಜೀವತೆತ್ತ ದುರಂತದ ಹಿನ್ನೆಲೆಯಲ್ಲಿ ಈ ವರ್ಷ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆಯೆಂದು ಹೇಳಿದ್ದಾರೆ.
ಬಂಟವಾಳದಲ್ಲಿ ಕಳೆದ 24 ಗಂಟೆಗಳಲ್ಲಿ 114 ಮಿಲಿಮೀಟರ್ ಮಳೆಯಾಗಿದ್ದರೆ, ಬೆಳ್ತಂಗಡಿಯಲ್ಲಿ 102.3 ಮಿಮೀ, ಮಂಗಳೂರು ತಾಲೂಕಿನಲ್ಲಿ 98.2 ಮಿಮೀ, ಉಪ್ಪಿನಂಗಡಿಯಲ್ಲಿ 93 ಮಿಲಿಮೀಟರ್ ಮತ್ತು ಬಜ್ಪೆ ವಿಮಾನನಿಲ್ದಾಣದಲ್ಲಿ 88.2 ಮತ್ತು ಸುಳ್ಯದಲ್ಲಿ 59.2 ಮಿಮೀ ಮಳೆಯಾಗಿದೆ. ನೇತ್ರಾವತಿ ನದಿಯ ಮಟ್ಟ ಬಂಟವಾಳದಲ್ಲಿ 4.8 ಮೀಟರ್‌ನಿಂದ 5.5 ಮೀಟರ್‌ಗಳಿಗೆ ಸೋಮವಾರ ಏರಿಕೆಯಾಗಿದೆ. ಅಪಾಯದ ಮಟ್ಟ 8.5 ಮೀಟರ್ ಎನ್ನಲಾಗಿದೆ. |