ಕರ್ನಾಟಕ ರಾಜ್ಯ ಮುಜರಾಯಿ ಸಚಿವರಾದ ವಿ. ಸೋಮಣ್ಣ ಅವರ ಮಾತಿನ ಭರಾಟೆ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ನನ್ನ ಪತಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಲ್ಲದೆ, ಕಪಾಳಕ್ಕೆ ಹೊಡೆದಿದ್ದಾರೆ ಎಂದು ಬಿಬಿಎಂಪಿ ಸಹಾಯಕ ಎಂಜಿನಿಯರ್ ಎ.ಎನ್. ಸೋಮರಾಜು ಅವರ ಪತ್ನಿ ಬಿ. ತ್ರಿವೇಣಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣದಲ್ಲಿ ದೂರು ನೀಡದಂತೆ ಸಚಿವರ ಕಡೆಯವರು ಕುಟುಂಬದ ಸದಸ್ಯರಿಗೆ ಒತ್ತಡ, ಬೆದರಿಕೆ ಹಾಕುತ್ತಿದ್ದಾರೆ. ಸಚಿವರ ವಿರುದ್ಧ ಕ್ರಮ ಜರುಗಿಸುವ ಜೊತೆಗೆ ನಮ್ಮ ಕುಟುಂಬದವರಿಗೆ ರಕ್ಷಣೆ ಕೊಡಿ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಮರಾಜ್ ಅವರ ಆರೋಗ್ಯ ಸುಧಾರಿಸಿದ್ದು, ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ವಿಶ್ರಾಂತಿಯಲ್ಲಿ ಇರಬೇಕೆಂದೂ ಯಾರಿಗೂ ಮಾತನಾಡಿಸಲು ಅವಕಾಶವಿಲ್ಲ ಎಂದು ನಿರ್ಬಂಧಿಸಲಾಗಿದೆ.
ಇದೇ ವೇಳೆ ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಘಟನೆಯಲ್ಲಿ ಸೋಮಣ್ಣ ಅವರ ತಪ್ಪಿಲ್ಲ. ಇದರ ಕುರಿತು ಮಧ್ಯ ಪ್ರವೇಶಿಸುವ ಬದಲು ಇನ್ನಷ್ಟು ಪರೀಶೀಲಿಸಿದ ನಂತರ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ. |