ಪ್ರಣಬ್ ಮುಖರ್ಜಿ ಸಲ್ಲಿಸಿರುವ ಕೇಂದ್ರದ ಬಜೆಟ್ ಸಂಪೂರ್ಣ ನಿರಾಶದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.ನಗರದಲ್ಲಿ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಥಿಕ ಹಿಂಜರಿತದಿಂದ ಕಂಗಾಲಾಗಿರುವ ರಾಷ್ಟ್ರದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಪೂರಕವಾಗಬಲ್ಲ ಪ್ರಬಲವಾದ ಸುಧಾರಣ ಕ್ರಮಗಳನ್ನು ನೀಡುವಲ್ಲಿ ಬಜೆಟ್ ವಿಫಲವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಹೆಸರಾದ ಬೆಂಗಳೂರು ನಗರಕ್ಕೆ ಮೂಲಭೂತ ಸೌಲಭ್ಯ ನೀಡುವಂತೆ ಕೋರಿದ್ದೇವು. ಆದರೆ ಕೇಂದ್ರ ಇದನ್ನು ಮನ್ನಣೆ ನೀಡಿಲ್ಲ. ಮುಂಬೈ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರವಾಹ ನಿರ್ವಹಣೆಗಾಗಿ ವಿಶೇಷ ಅನುದಾನ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕದ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಅವರು ದೂರಿದ್ದಾರೆ.ಅಲ್ಲದೆ, ಸುಮಾರು 1.20 ಕೋಟಿ ಜನರಿಗೆ ಉದ್ಯೋಗ ಒದಗಿಸುವ ಮಾತುಗಳನ್ನಾಡಿರುವ ಹಣಕಾಸು ಸಚಿವರು ಉದ್ಯೋಗ ಸೃಜನೆಯ ಮಾರ್ಗಗಳನ್ನು ಪ್ರಕಟಿಸಿಲ್ಲ. ಗ್ರಾಮೀಣ ವಸತಿಗೆ ಕೇವಲ ಎರಡು ಸಾವಿರ ಕೋಟಿ ರೂಪಾಯಿ ಮತ್ತು ತ್ವರಿತ ನೀರಾವರಿ ನೆರವು ಯೋಜನೆಗಳಿಗೆ ಕಡಿಮೆ ಹಣ ಹಂಚಿಕೆ ಮಾಡಿರುವುದು ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. |