ಉಡುಪಿ ಜಿಲ್ಲೆಯ ಉಪ್ಪುಂದ-ಅರೆಹೊಳೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಅದಿರುಲಾರಿ ಮತ್ತು ಆಟೋರಿಕ್ಷಾ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಮಂಗಳವಾರ ಸಂಭವಿಸಿದೆ.
ಅದಿರು ಲಾರಿಯು ಈ ನಾಲ್ವರು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಎರಡೂ ವಾಹನಗಳು ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ತೊರೆಗೆ ಬಿದ್ದವು. ಮೃತಪಟ್ಟವರನ್ನು ಲಕ್ಷ್ಮಿ ಗಾಣಿಗ, ವಂದನಾ, ಕೇಶವ ಮತ್ತು ರಿಕ್ಷಾ ಚಾಲಕ ಶಂಕರ ದೇವಾಡಿಗ ಎಂದು ಗುರುತಿಸಲಾಗಿದೆ. ಎಲ್ಲ ನಾಲ್ಕು ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.
ಗಾಯಾಳುಗಳನ್ನು ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಅಪಘಾತ ಸಂಭವಿಸಿದೆಯೆಂದು ವರದಿಯಾಗಿದ್ದು, ಗಾಯಗೊಂಡರಲ್ಲಿ ವಾಣಿ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ.
ರಾಷ್ಟ್ರ್ರೀಯ ಹೆದ್ದಾರಿಯಲ್ಲಿ ವೇಗವಾಗಿ ವಾಹನಗಳ ಚಾಲನೆಯಿಂದ ಇತ್ತೀಚೆಗೆ ಅನೇಕ ಅಪಘಾತಗಳು ಸಂಭವಿಸಿದ್ದು ಅನೇಕ ಮಂದಿ ಜೀವತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಅಪಘಾತ ನಡೆದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. |