ರಾಜ್ಯದ ಏಳು ಕಡೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಏಳು ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಬೀದರ್, ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಹಾಗೂ ಬೆಂಗಳೂರಿನಲ್ಲಿ ಬುಧವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ಮನೆಯಲ್ಲಿದ್ದ ಸಂಪಾದನೆಗಿಂತ ಹೆಚ್ಚು ಆಸ್ತಿಯನ್ನು ಮುಟ್ಟುಗೋಲು ಹಾಕಿದರು.
ಹುಬ್ಬಳ್ಳಿಯ ಸಂಚಾರಿ ಎಸಿಪಿ ಫಕೀರಪ್ಪ ಬಿ. ಚೌಹಾಣ್(1.48 ಕೋಟಿ) ಬೀದರ್‌ನ ಮೋಟಾರ್ ವಾಹನ ನಿರೀಕ್ಷಕ ಇಕ್ರಂ ಪಾಷ (80 ಲಕ್ಷ), ಗುಲ್ಬರ್ಗಾದ ಭೂಸೇನಾ ನಿಗಮದ ಸಹಾಯಕ ಅಭಿಯಂತರ ಸೈಯದ್ ಮುಬಿನ್(1.21 ಕೋಟಿ), ರಾಯಚೂರಿನ ಮೋಟಾರ್ ವಾಹನ ನಿರೀಕ್ಷಕ ಈರಣ್ಣ(3.57 ಕೋಟಿ), ಬೆಂಗಳೂರಿನ ಅಬಕಾರಿ ನಿರೀಕ್ಷಕ ರಾಮಚಂದ್ರಪ್ಪ(1.31 ಕೋಟಿ), ಮೈಸೂರು ಮಿನರಲ್ಸ್ ಆಡಳಿತಾಧಿಕಾರಿ ರಾಮಚಂದ್ರ ಮೂರ್ತಿ(1.55 ಕೋಟಿ) ಮತ್ತು ಬೆಂಗಳೂರಿನ ರೈಲ್ವೇ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಎ.ಡಿ.ನಾಗರಾಜು(75 ಲಕ್ಷ) ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ.
ಲೋಕಾಯುಕ್ತ ಕಾರ್ಯಾಚರಣೆಯ ಬಹುದೊಡ್ಡ ಭ್ರಷ್ಟ ಅಧಿಕಾರಿಗಳ ಪತ್ತೆ ಇದಾಗಿದ್ದು, ಹಿರಿಯ ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿಯನ್ನು ಬಯಲಿಗೆಳೆಯಲಾಗಿದೆ. ಹೆಚ್ಚಿನ ಅಧಿಕಾರಿಗಳು ತಮ್ಮ ವಾಸಸ್ಥಳವಲ್ಲದೆ, ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. |