ರಾಜ್ಯಪಾಲನಾಗಿ ಸಂವಿಧಾನ ರಕ್ಷಿಸುವುದು ತಮ್ಮ ಮುಖ್ಯವಾದ ಹೊಣೆಗಾರಿಕೆಯಾಗಿದೆ ಎಂದು ರಾಜ್ಯದ ನೂತನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.
ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ, ಕೋಮು ಸೌಹಾರ್ದ ಕಾಪಾಡುವ ಜವಾಬ್ದಾರಿ ನನ್ನ ಮೇಲಿದ್ದು ಇದನ್ನು ಸಮರ್ಥವಾಗಿ ನಿಭಾಯಿಸುವೆ, ಅಶಾಂತಿ ತಲೆದೋರಿದರೆ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ದೇಶವನ್ನು ಎಲ್ಲ ಧರ್ಮಗಳು ಆಳಿದ್ದು, ಇತಿಹಾಸ ಸ್ಮರಣೆ ಅತ್ಯಗತ್ಯ. ಇದರಿಂದ ಕೋಮು ಸೌಹಾರ್ದ ಕಾಪಾಡಿಕೊಳ್ಳಬಹುದು ಎಂದು ಪ್ರತಿಪಾದಿಸಿದ್ದಾರೆ.
ಇಲ್ಲಿಯವರೆಗೂ ರಾಜ್ಯವನ್ನಾಳಿದ ಎಲ್ಲ ಮುಖ್ಯಮಂತ್ರಿಗಳ ಆಡಳಿತ ವೈಖರಿಯ ಅರಿವು ತಮಗಿದ್ದು, ತಾವು ತಮ್ಮ ಸಂವಿಧಾನಬದ್ಧ ಕರ್ತವ್ಯ ನಿರ್ವಹಿಸುವುದಾಗಿ ಭಾರದ್ವಾಜ್ ಹೇಳಿದ್ದಾರೆ.
|