ಮೈಸೂರಿನಲ್ಲಿ ಸೆಪ್ಟೆಂಬರ್ 19ರಿಂದ 10 ದಿನಗಳ ಕಾಲ ನಡೆಯುವ ದಸರ ಉತ್ಸವಕ್ಕಾಗಿ 6 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯಸರ್ಕಾರ ನಿರ್ಧರಿಸಿದೆ. ದಸರಾ ಉತ್ಸವದ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಬಾರಿಯ ದಸರ ಸಮಾರಂಭಗಳಿಗೆ ಸಿದ್ಧತೆಯನ್ನು ಎರಡು ತಿಂಗಳು ಪೂರ್ವಭಾವಿಯಾಗಿ ಕೈಗೊಳ್ಳಲಾಗಿದೆ.
ಸೆ.19ರಂದು ಆರಂಭವಾಗುವ ಉತ್ಸವ ಅದ್ಧೂರಿಯ ಜಂಬೂ ಸವಾರಿ ಮೆರವಣಿಗೆಯೊಂದಿಗೆ ಸೆ.28ರಂದು ಅಂತ್ಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ದಸರ ಉತ್ಸವದಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಕುಟುಂಬಗಳಿಗೆ ದಸರ ಉತ್ಸವ ವೀಕ್ಷಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತೆಂದು ಅವರು ಹೇಳಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.ದಸರ ಉತ್ಸವದಲ್ಲಿ ಪ್ರವಾಸಿಗಳು ಎದುರಿಸುವ ಸಂಕಷ್ಟಗಳ ಬಗ್ಗೆ ಉಲ್ಲೇಖಿಸಿ, ಸಂಚಾರ ಮತ್ತು ವಾಹನ ಪಾರ್ಕಿಂಗ್ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. |