ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದಲ್ಲಿ 371ನೇ ವಿಧಿಗೆ ತಿದ್ದುಪಡಿ ತರುವ ಪ್ರಕ್ರಿಯೆಯನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಚುರುಕುಗೊಳಿಸುಂತೆ ಒತ್ತಾಯಿಸಿ ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿಯು ಜು.14ರಂದು ಗುಲ್ಬರ್ಗ ಬಂದ್‌ಗೆ ಕರೆ ನೀಡಿದೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೋರಾಟಸಮಿತಿಯ ಅಧ್ಯಕ್ಷ ವೈಜನಾಥ್ ಪಾಟೀಲ್ ತೆಲಂಗಾಣ ಮಾದರಿಯಲ್ಲಿ 371ನೇ ವಿಧಿಗೆ ತಿದ್ದುಪಡಿ ತರುವಂತೆ ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.
ತೆಲಂಗಾಣ ಮಾದರಿಯಲ್ಲಿ 371ನೇ ವಿಧಿಯನ್ನು ತಿದ್ದುಪಡಿ ಮಾಡಬೇಕೆಂದು ಯಡಿಯೂರಪ್ಪ ದೃಷ್ಟಿಕೋನವನ್ನು ಅವರು ಸಮರ್ಥಿಸಿಕೊಂಡರು. ಏತನ್ಮಧ್ಯೆ, 371ನೇ ವಿಧಿಗೆ ವಿದರ್ಭ ಮಾದರಿಯಲ್ಲಿ ತಿದ್ದುಪಡಿಗೆ ಒತ್ತಾಯಿಸಿ ಜು.14ರಂದೇ ಕನ್ನಡಪರ ಹೋರಾಟ ಸಮಿತಿ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಬಂದ್‌ಗೆ ಕರೆ ನೀಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಅನೇಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಗುಲ್ಬರ್ಗಕ್ಕೆ ವಿಶೇಷ ಸ್ಥಾನಮಾನ ಮತ್ತು ವಿಶೇಷ ಸೌಲಭ್ಯ ಕಲ್ಪಿಸುವ 371ನೇ ವಿಧಿಗೆ ತಿದ್ದುಪಡಿ ತರುವಂತೆ ಒತ್ತಾಯಿಸುತ್ತಿದೆ. ಮಹಾರಾಷ್ಟ್ರದ ವಿದರ್ಭ ಮತ್ತು ಆಂಧ್ರದ ತೆಲಂಗಾಣಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವ 371ನೇ ವಿಧಿಗೆ ಕೇಂದ್ರ ಸರ್ಕಾರ ಈಗಾಗಲೇ ತಿದ್ದುಪಡಿ ತಂದಿದೆ. |