ಹಿರಿಯ ಪೊಲೀಸ್ ಅಧಿಕಾರಿ ಹರಿಕೃಷ್ಣ, ಎಸ್ಸೈ ಶಕೀಲ್ ಅಹಮದ್ ಸೇರಿದಂತೆ 15ಕ್ಕೂ ಹೆಚ್ಚು ಪೊಲೀಸರನ್ನು ಹತ್ಯೆ ಮಾಡಿದ ಮೂರು ಪ್ರಕರಣಗಳಲ್ಲಿ ದಂತಚೋರ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಜಾಮೀನು ನಿರಾಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ| ಸುಭಾಷ್ ಬಿ. ಅಡಿ ಅವರಿದ್ದ ಏಕ ಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಆರಂಭಿಕ ಹಂತದ ವಿಚರಣೆಯಲ್ಲಿ ಮುತ್ತುಲಕ್ಷ್ಮಿ ವಿರುದ್ಧ ಸಾಕ್ಷಿಗಳು ಲಭ್ಯವಾಗಿರುವುದರಿಂದ ಜಾಮೀನು ಅರ್ಜಿಯನ್ನು ನಿರಾಕರಿಸಲಾಯಿತು. ಸರ್ಕಾರದ ಪರ ವಾದ ಮಂಡಿಸಿದ್ದ ಸರ್ಕಾರಿ ಅಭಿಯೋಜಕ ಬಿ. ಬಾಲಕೃಷ್ಣ ಮುತ್ತುಲಕ್ಷ್ಮಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಯನ್ನು ಹೈಕೋರ್ಟ್‌ಗೆ ಒಪ್ಪಿಸಿದರು.
ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ರಾಮಾಪುರ ಠಾಣೆ ವ್ಯಾಪ್ತಿಯಲ್ಲಿ 1992ರಲ್ಲಿ ವೀರಪ್ಪನ್ ಮತ್ತು ಆತನ ಸಹಚರರು ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಎಸ್ಪಿ ಹರಿಕೃಷ್ಣ, ಎಸ್ಸೈ ಶಕೀಲ್ ಅಹಮದ್ ಸೇರಿದಂತೆ ಹಲವರು ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ 166 ಮಂದಿಯ ವಿರುದ್ಧ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಮುತ್ತುಲಕ್ಷ್ಮಿ ಕೂಡ ಒಬ್ಬರು. ಇದಕ್ಕೆ ಸಂಬಂಧಿಸಿದಂತೆ ಮುತ್ತುಲಕ್ಷ್ಮಿ ಜಾಮೀನು ಕೋರಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 2009ರಲ್ಲಿ ಅಧೀನ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಇದೀಗ ಹೈಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿಯೂ ವಜಾಗೊಂಡಿದೆ.
|