ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿಯಲ್ಲಿನ ಭಿನ್ನಮತ ಇದೀಗ ಸ್ಫೋಟಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಈ ಬಾರಿ ಸ್ಪೀಕರ್ ಜಗದೀಶ್ ಶೆಟ್ಟರ್ ನೇತೃತ್ವದ ಬಣ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಲು ನಿರ್ಧರಿಸಿದೆ.
ಈ ಸಂಬಂಧ ಈಗಾಗಲೇ ಸಮಾನ ಮನಸ್ಕರೊಂದಿಗೆ ಶಾಸಕರು ಮತ್ತು ಮುಖಂಡರು ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅಧಿವೇಶನ ಮುಗಿಯುತ್ತಿದ್ದಂತೆ ಶೆಟ್ಟರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆ ಇತ್ತೀಚೆಗೆ ಅಧಿಕೃತ ಕಾರ್ಯಕ್ರಮದ ನಿಮಿತ್ತ ದಿಲ್ಲಿಗೆ ತೆರಳಿದ್ದ ಶೆಟ್ಟರ್, ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಿ ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅಧಿವೇಶನಕ್ಕೂ ಮೊದಲೇ ರಾಜೀನಾಮೆ ನೀಡುವುದಾಗಿ ಪಟ್ಟು ಹಿಡಿದ್ದರು ಎನ್ನಲಾಗಿದೆ.
ಸರ್ಕಾರದ ಮಟ್ಟದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸ ಆಗುತ್ತಿಲ್ಲ. ಕಾರ್ಯಕರ್ತರು ಹೇಳಿದ ಕೆಲಸಗಳಿರಲಿ, ಕನಿಷ್ಠ ಪಡಿತರ ಚೀಟಿ ಕೊಡಿಸಲು ತಮ್ಮಿಂದ ಆಗುತ್ತಿಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲೂ ತಮ್ಮ ಮಾತು ನಡೆಯುತ್ತಿಲ್ಲ ಎಂದು ಅವರು ಬಿಜೆಪಿ ಮುಖಂಡರಲ್ಲಿ ಅವಲತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
|