ಆಂಧ್ರ ಪ್ರದೇಶದಲ್ಲಿ ಅಕ್ರಮವಾಗಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳ ಪರೀಶೀಲನೆಗಾಗಿ ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶೀಘ್ರ ಆಂಧ್ರಕ್ಕೆ ಭೇಟಿ ನೀಡಲಿರುವ ಈ ಸಮಿತಿಯ ನೀಡುವ ವರದಿ ಆಧರಿಸಿ ಮುಂದಿನ ಹೆಜ್ಜೆ ಇಡಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆನ್ನಲಾಗಿದೆ.
ಕೃಷ್ಣಾ ಕೊಳ್ಳದಲ್ಲಿ ಅಕ್ರಮ ನೀರಾವರಿ ಯೋಜನೆ ನಡೆದಿದೆ ಎಂದು ಆರೋಪಿಸಿ ಪರೀಶೀಲನೆಗೆ ತಜ್ಞರ ಸಮಿತಿ ಕಳುಹಿಸುವ ಆಂಧ್ರ ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದಿಂದ ಈ ನಿರ್ಧಾರ ಹೊರಬಿದ್ದಿದೆ. ಕೃಷ್ಣಾ ಕೊಳ್ಳಕ್ಕೆ ಆಂಧ್ರ ತಜ್ಞರು ಆಗಮಿಸುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಅವಲೋಕಿಸಲು ಸಚಿವ ಬೊಮ್ಮಾಯಿ ಅಧ್ಯಕ್ಷತೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಂಧ್ರ ಪ್ರದೇಶ ಕೈಗೊಳ್ಳುತ್ತಿರುವ 11 ಅಕ್ರಮ ನೀರಾವರಿ ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇವುಗಳ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
|