ಸರ್ಕಾರವು ಗುಲ್ಬರ್ಗಾ-ಬೀದರ್ ಹಾಲು ಒಕ್ಕೂಟವನ್ನು ಕಾನೂನುಬಾಹಿರವಾಗಿ ಸೂಪರ್‌ಸೀಡ್ ಮಾಡಿದೆ ಎಂಬುದಾಗಿ ಆರೋಪಿಸಿದ ವಿಪಕ್ಷಗಳು ಶುಕ್ರವಾರ ಸದನದಲ್ಲಿ ಕೋಲಾಹಲ ಎಬ್ಬಿಸಿದವು. ಸದನದ ಭಾವಿಗೆ ಧುಮುಕಿ ಮುಷ್ಕರ ನಡೆಸಿದ ಜೆಡಿಎಸ್ ಸದಸ್ಯರು ಬಳಿಕ ಸರ್ಕಾರದ ನಡೆಯನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.
ಗೌಡರ ಕುಟುಂಬದ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರಿಸಿರುವ ಬಳ್ಳಾರಿಯ ರೆಡ್ಡಿ ಸಹೋದರರು, ಎಚ್.ಡಿ. ರೇವಣ್ಣರನ್ನು ಕೆಎಂಎಫ್ ಮುಖ್ಯಸ್ಥ ಸ್ಥಾನದಿಂದ ಪದಚ್ಯುತಗೊಳಿಸಲು ಪಣತೊಟ್ಟಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರೇವಣ್ಣ ಅವರ ಪ್ರಮುಖ ವಿರೋಧಿ ರೆಡ್ಡಿ ಸಹೋದರರಲ್ಲಿ ಒಬ್ಬರಾಗಿರುವ ಜಿ.ಸೋಮಶೇಖರ ರೆಡ್ಡಿ.
"ಒಕ್ಕೂಟದ ಮುಖ್ಯಸ್ಥ ಹಾಗೂ ಒಂಬತ್ತು ನಿರ್ದೇಶಕರನ್ನು ಪದಚ್ಯುತಗೊಳಿಸುವ ವೇಳೆ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ. ಜುಲೈ 1 ತಾರೀಕಿನ ನೋಟೀಸುಗಳನ್ನು ನಿರ್ದೇಶಕರ ಮನೆಯ ಗೋಡೆಯಲ್ಲಿ ಜುಲೈ ಆರರಂದು ಅಂಟಿಸಲಾಗಿದೆ ಮತ್ತು ಜುಲೈ 9ರನ್ನು ಸೂಪರ್‌ಸೀಡ್ ಮಾಡಿದ್ದಾರೆ. ಅವರಿಗೆ ಉತ್ತರಿಸಲು ಸಾಕಷ್ಟು ಸಮಯ ನೀಡಲಾಗಿಲ್ಲ" ಎಂದು ಬಂಡೆಪ್ಪ ಕಾಶೆಂಪುರ್ ದೂರಿದರು.
ಜೆಡಿಎಸ್ ಆರೋಪಕ್ಕೆ ಬೆಂಬಲ ಸೂಚಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೋಟೀಸಿಗೆ ಉತ್ತರ ನೀಡಲು ನಿರ್ದೇಶಕರು ಮತ್ತು ಅಧ್ಯಕ್ಷರಿಗೆ ಸಾಕಷ್ಟು ಸಮಯಾವಕಾಶ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಹಾಗಿರುವಾಗ ಸರ್ಕಾರವು ಒಕ್ಕೂಟವನ್ನು ಸೂಪರ್‌ಸೀಡ್ ಮಾಡುವ ತನ್ನ ಆದೇಶವನ್ನು ಬದಿಗಿರಿಸಿ ಸೂಕ್ತಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ನುಡಿದರು.
ಆದರೆ ವಿಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದ ಸಹಕಾರ ಸಚಿವ ಲಕ್ಷ್ಮಣ್ ಎಸ್ ಸವದಿ ಅವರು ಸದಸ್ಯರು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದ್ದು ಆ ವೇಳೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ನುಡಿದರು.
ಸಂಕಟದಲ್ಲಿ ರೇವಣ್ಣ ಕೆಎಂಎಫ್ ಮತ್ತು ಅದರ ಅಧ್ಯಕ್ಷ ರೇವಣ್ಣ ಅವರು ಹೆಚ್ಚಿನ ತೊಂದರೆಗೆ ಸಿಲುಕಿದ್ದಾರೆ. ಸರ್ಕಾರವು ಜುಲೈ 17ರಿಂದ ಕೆಎಂಎಫ್ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಿದೆ. 2001-2002ರಿಂದ 2007-08ರ ಲೆಕ್ಕಪತ್ರಗಳ ಪರಿಶೀಲನೆಯನ್ನು ಸರ್ಕಾರ 2008ರ ನವೆಂಬರ್ 8ರಂದು ಆರಂಭಿಸಿದೆ. ಅರ್ಹತೆ ಇಲ್ಲದ ವ್ಯಕ್ತಿಯನ್ನು ಆಡಳಿತ ನಿರ್ದೇಶರಾಗಿ ನೇಮಿಸಿರುವುದು, ಅನವಶ್ಯಕ ವೆಚ್ಚ, ಹಾಲುಉತ್ಪನ್ನಗಳ ಮಾರಾಟದ ಅವೈಜ್ಞಾನಿಕ ವಿಧಾನ, ನೇಮಕಾತಿಯಲ್ಲಿ ಅವ್ಯವಹಾರ ಮುಂತಾದ ಆರೋಪಗಳನ್ನು ಮಾಡಲಾಗಿದೆ. ಅದಾಗ್ಯೂ ಈ ಕುರಿತು ಹೈಕೋರ್ಟಿಗೆ ತೆರಳಿರುವ ಕೆಎಂಎಫ್ ಅಧಿಕಾರಿಗಳು ಆರೋಪಗಳಿಗೆ ಉತ್ತರಿಸಲು ಜುಲೈ 17ರ ತನಕ ಸಮಯಾವಕಾಶ ಪಡೆದಿದ್ದಾರೆ. |