ಲಾಲ್ಬಾಗಿನಲ್ಲಿ ಆರಂಭಗೊಂಡ ವೈನ್ ಮೇಳವನ್ನು ತೋಟಗಾರಿಕಾ ಸಚಿವ ಉಮೇಶ್ ಕತ್ತಿ ಅವರು ಉದ್ಘಾಟಿಸಿದರು. ದ್ರಾಕ್ಷಾ ವೈನ್ ಉದ್ಯಮದ ಸ್ಥಿತಿಗತಿ, ವೈನ್ ತಯಾರಿಕೆ ಮತ್ತು ಉಪಯೋಗಿಸುವ ವಿಧಾನ, ವೈನ್ ಉದ್ಯಮಕ್ಕೆ ಇರುವ ಅವಕಾಶಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಮೇಳದಲ್ಲಿ ನಡೆಯಲಿದೆ.
ಮೂರು ದಿನಗಳ ಕಾಲದ ವೈನ್ ಮೇಳದಲ್ಲಿ ಉದ್ಯಮಿಗಳು, ರೈತರು, ಪಾನಪ್ರಿಯರರಿಗಾಗಿ ಗ್ರೋವರ್, ನಾಕಾ, ಕಿನ್ವ ಬ್ರಾಂಡ್ ವೈನ್‌ಗಳು ಮಾರಾಟಕ್ಕೆ ಲಭ್ಯವಿದ್ದವು. ರೋಸ್, ರೆಡ್ ಮತ್ತು ವೈಟ್‌ವೈನ್ ಲಭ್ಯವಿದೆ. ಇದರ ಅಂಗವಾಗಿ ಎರಡು ಬಾಟಲ್ ಕೊಂಡರೆ ಒಂದು ವಾಚ್ ಮತ್ತು ಒಂದು ಬಾಟಲ್ ಕೊಂಡರೆ ಟೀ-ಶರ್ಟ್ ಉಚಿತ ನೀಡಲಾಗುತ್ತಿದೆ.
ಈ ಮೇಳವನ್ನು ಉದ್ಘಾಟಿಸಿದ ತೋಟಗಾರಿಕಾ ಸಚಿವ ಉಮೇಶ್ ಕತ್ತಿ, ಇತರ ಮದ್ಯಗಳಂತೆ ವೈನ್‌ನಲ್ಲಿ ಆಲ್ಕೋಹಾಲ್ ಹೆಚ್ಚು ಇರುವುದಿಲ್ಲ. ವೈನ್ ಉದ್ಯಮದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಇತರ ಮದ್ಯಗಳಿಂದ ಯುವಪೀಳಿಗೆಯನ್ನು ಇದರತ್ತ ಆಕರ್ಷಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ವೈನ್ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತೆರಿಗೆ ಪದ್ಧತಿ ಪರಿಷ್ಕರಿಸಬೇಕು. ವೈನರಿಗಳು ಹೆಚ್ಚಾದಂತೆ ದ್ರಾಕ್ಷಿ ಬೆಳೆವ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ. ರೈತ ಪರವಾದ ನೀತಿಯನ್ನು ತರಲು ಬೆಂಬಲ ನೀಡುವುದಾಗಿ ಅವರು ನುಡಿದರು. |