ಸಚಿವ ಹರತಾಳು ಹಾಲಪ್ಪ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ಅವರುಗಳ ನಡುವಿನ ಮುಸುಕಿನ ಗುದ್ದಾಟ ಬಯಲಿಗೆ ಬಂದಿದ್ದು, ಅವರು ಕ್ಷುಲ್ಲಕ ಕಾರಣಕ್ಕಾಗಿ ಸಭೆಯೊಂದರಲ್ಲಿ ಬಹಿರಂಗವಾಗಿ ಗುದ್ದಾಡಿಕೊಂಡು ಶಿವಮೊಗ್ಗ ಬಿಜೆಪಿ ಘಟಕದ ಭಿನ್ನಮತ ಬಯಲಿಗೆ ಬಂದಿದೆ.
ಸಾಗರಕ್ಷೇತ್ರದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಗೆ ತಮ್ಮನ್ನ ಆಹ್ವಾನಿಸಿಲ್ಲ ಎಂದು ಸಿಟ್ಟುಗೊಂಡ ಶಾಸಕ ಗೋಪಾಲಕೃಷ್ಣ ಅವರು ತಮ್ಮ ಬೆಂಬಲಿಗರೊಡನೆ ಸಚಿವ ಹರತಾಳು ಹಾಲಪ್ಪರೊಂದಿಗೆ ಜಟಾಪಟಿಗೆ ಇಳಿದಿದ್ದರು.
ತನ್ನ ತವರು ಜಿಲ್ಲೆಯಲ್ಲೇ ನಡೆದಿರುವ ಈ ಜಟಾಪಟಿಯು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿದ್ದೆಗೆಡಿಸುವಂತೆ ಮಾಡಿದೆ. ಅವರೀಗ ಇಬ್ಬಣಗಳಿಗೆ ತೇಪೆ ಹಚ್ಚುವ ಕಾರ್ಯಕ್ಕಿಳಿದಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ ಆಗಮಿಸಿರುವ ಮುಖ್ಯಮಂತ್ರಿಗಳು ದಿನಪೂರ್ತಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಬಂಡಾಯ ಶಮನಗೊಳಿಸಲು ಯತ್ನಿಸಿದ್ದಾರೆ.
ಪ್ರಕರಣದ ಚರ್ಚೆ ನಾಳೆ ಈ ಮಧ್ಯೆ ಶಾಸಕ ಹಾಗೂ ಸಚಿವರ ಹೊಯ್ ಕೈ ಅನ್ನು ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ. ಸದಾನಂದ ಗೌಡರು ಈ ಕುರಿತು ಸಚಿವ ಹಾಲಪ್ಪ ಹಾಗೂ ಶಾಸಕ ಬೇಳೂರು ಅವರೊಂದಿಗೆ ಸೋಮವಾರ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. |