ಸರಿಸರುಮಾರು ಇಪ್ಪತ್ತು ವರ್ಷಗಳ ಕಾಲ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)ವನ್ನು ಆಳಿದ್ದ ಜಿಡಿಎಸ್‌ನ ಎಚ್.ಡಿ. ರೇವಣ್ಣ ಅವರನ್ನು ಕೆಳಗಿಸಲು ಬಿಜೆಪಿ ರೂಪಿಸಿರುವ ತಂತ್ರ ಫಲ ನೀಡಿದೆ. ಈ ತಿಂಗಳ 20 ರಂದು ನಡೆಯಲಿರುವ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಗದ್ದುಗೆಗೆ ರೆಡ್ಡಿ ಸಹೋದರರಲ್ಲೊಬ್ಬರಾಗಿರುವ ಸೋಮಶೇಖರ ರೆಡ್ಡಿ ಏರುವುದು ಬಹುತೇಕ ಖಚಿತ ಎನ್ನಲಾಗಿದೆ.ಜುಲೈ 9, 10, 11 ರಂದು ನಡೆದ 13 ಜಿಲ್ಲಾ ಹಾಲು ಒಕ್ಕೂಟಗಳ ಚುನಾವಣೆಯಲ್ಲಿ ಬಿಜೆಪಿ ನಿರ್ದೇಶಕರೇ ಆಯ್ಕೆಯಾಗಿದ್ದಾರೆ. ಅಲ್ಲದೇ ಸರಕಾರದಿಂದ ನಾಮಕರಣಗೊಂಡಿರುವ ಮೂರು ಸದಸ್ಯರು ಮತ್ತು ಮೂರು ಅಧಿಕಾರಿಗಳು ಬಿಜೆಪಿ ಅಭ್ಯರ್ಥಿ ಪರ ನಿಲ್ಲುವುದು ನಿಸ್ಸಂಶಯ. ಅಂದರೆ, ಬಿಜೆಪಿ ಅಭ್ಯರ್ಥಿಪರ ಮತ ಚಲಾಯಿಸಲಿರುವ ನಿರ್ದೇಶಕರ ಸಂಖ್ಯೆ 16 ಆದರೆ, ರೇವಣ್ಣ ಪರ ಕೇವಲ ಇಬ್ಬರು ನಿರ್ದೇಶಕರಿದ್ದಾರೆ. ರೇವಣ್ಣ ಎದುರು ಸೋಮಶೇಖರ್ ಸ್ಫರ್ಧಿಸಲಿದ್ದಾರೆ.ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದಲೇ ಕೆಎಂಎಫ್ ಮೇಲೆ ಒಂದಿಲ್ಲ ಒಂದು ವಿಚಾರದಲ್ಲಿ ಗುದ್ದಾಡುತ್ತಲೇ ಬಂದಿದೆ. ಸರ್ಕಾರವು ಜುಲೈ 17ರಿಂದ ಕೆಎಂಎಫ್ ಲೆಕ್ಕಪತ್ರಗಳ ಪರಿಶೀಲನೆ ನಡೆಸಲಿದೆ. 2001-2002ರಿಂದ 2007-08ರ ಲೆಕ್ಕಪತ್ರಗಳ ಪರಿಶೀಲನೆಯನ್ನು ಸರ್ಕಾರ 2008ರ ನವೆಂಬರ್ 8ರಂದು ಆರಂಭಿಸಿದೆ. ಅರ್ಹತೆ ಇಲ್ಲದ ವ್ಯಕ್ತಿಯನ್ನು ಆಡಳಿತ ನಿರ್ದೇಶರಾಗಿ ನೇಮಿಸಿರುವುದು, ಅನವಶ್ಯಕ ವೆಚ್ಚ, ಹಾಲುಉತ್ಪನ್ನಗಳ ಮಾರಾಟದ ಅವೈಜ್ಞಾನಿಕ ವಿಧಾನ, ನೇಮಕಾತಿಯಲ್ಲಿ ಅವ್ಯವಹಾರ ಮುಂತಾದ ಆರೋಪಗಳನ್ನು ಮಾಡಲಾಗಿದೆ. ಅದಾಗ್ಯೂ ಈ ಕುರಿತು ಹೈಕೋರ್ಟಿಗೆ ತೆರಳಿರುವ ಕೆಎಂಎಫ್ ಅಧಿಕಾರಿಗಳು ಆರೋಪಗಳಿಗೆ ಉತ್ತರಿಸಲು ಜುಲೈ 17ರ ತನಕ ಸಮಯಾವಕಾಶ ಪಡೆದಿದ್ದಾರೆ. |