ಮೈಸೂರು ಗಲಭೆ ಸರ್ಕಾರದ ವಿರುದ್ಧದ ಷಡ್ಯಂತ್ರ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ಸಂಸದ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದು ಬಿಜೆಪಿ ಅಂಗ ಸಂಸ್ಥೆಗಳು ನಡೆಸಿದ ಷಡ್ಯಂತ್ರ ಎಂದಿದ್ದಾರೆ.
ಶನಿವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಆರ್ಎಸ್ಎಸ್ ನೇತೃತ್ವದ ಸಂಘ ಪರಿವಾರಗಳು ಮೈಸೂರಿನ ಶಾಂತಿಗೆ ಭಂಗ ತಂದಿವೆ ಎಂದು ಆರೋಪಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಸಂಘ ಪರಿವಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, "ಮೈಸೂರು ಗಲಭೆ ಸಂಬಂಧಿಸಿ ಕೆಲ ಸಂಘಟನೆಗಳ ಮೇಲೆ ನಿಷೇಧ ಹೇರಲು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಒತ್ತಾಯಿಸಿದ್ದಾರೆ. ಆದರೆ, ಸಂಘ ಪರಿವಾರದ ಬಗ್ಗೆ ಚಕಾರ ಎತ್ತಿಲ್ಲ" ಎಂದು ಟೀಕಿಸಿದರು.
"ಇತರ ಸಂಘಟನೆಗಳ ನಿಷೇಧದ ಬಗ್ಗೆ ಪ್ರಧಾನಿಗೆ ಮುಖ್ಯಮಂತ್ರಿ ಪತ್ರ ಬರೆಯುತ್ತಾರೆ. ಬಿಜೆಪಿ ಅಂಗ ಸಂಸ್ಥೆಗಳ ಚಟುವಟಿಕೆ ಕುರಿತೂ ಪ್ರಧಾನಿಗೆ ಮಾಹಿತಿ ರವಾನಿಸುವ ಧೈರ್ಯವನ್ನು ಅವರು ತೋರುತ್ತಾರಾ? ಸೆಕ್ಷನ್ 144 ಜಾರಿಯಲ್ಲಿದ್ದರೂ ಟ್ರಕ್‌ನಲ್ಲಿ ಜನರನ್ನು ಕರೆದುಕೊಂಡು ಬರಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸರಕಾರ ಏನು ಮಾಡುತ್ತಿತ್ತು. ಗಲಭೆಕೋರರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕಿತ್ತು" ಎಂದು ಕುಮಾರ ಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳೂರಿನಲ್ಲಿ ನಡೆದಿದ್ದ ಗಲಾಟೆ ಮೈಸೂರಿಗೆ ವಿಸ್ತರಣೆ ಆಗಿದೆ. ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲೂ ಸರಕಾರ ಎಡವಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ವೈಫಲ್ಯದಿಂದಲೇ ಮೈಸೂರಿನ ನೆಮ್ಮದಿ ಹಾಳಾಗಿದೆ ಎಂದವರು ಗಂಭೀರ ಆರೋಪ ಮಾಡಿದ್ದಾರೆ.
|