ಮಧ್ಯಪ್ರದೇಶಕ್ಕೆ ವರ್ಗವಾಗಿ ತೆರಳುವ ಮುನ್ನ ಮಾಜಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು. ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಸಿಲುಕಿದ್ದ ಧರ್ಮಸಿಂಗ್ ಅವರನ್ನು ಬಚಾವ್ ಮಾಡುವ 'ಉಡುಗೊರೆ' ನೀಡಿ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ.
ಅಕ್ರಮಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿರುವ ವರದಿಯಿಂದ ಧರ್ಮಸಿಂಗ್ ಹೆಸರನ್ನು ಕೈಬಿಡುವಂತೆ ಸೂಚಿಸಿ ಠಾಕೂರ್ ಅವರು ಲೋಕಾಯುಕ್ತ ಸಂತೋಷ್ ಹೆಗ್ಡೆಯವರಿಗೆ ಪತ್ರಬರೆದಿದ್ದು, ಈ ಪತ್ರವು ಜುಲೈ ಆರರಂದು ಲೋಕಾಯುಕ್ತರ ಕೈ ಸೇರಿದೆ.
"ರೈತರಿಗೆ ಸೇರಿದ ಪಟ್ಟಾಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಧರಂ ಶಿಫಾರಸ್ಸು ಮಾಡಿರುವುದು ರೈತರ ಹಿತದೃಷ್ಟಿಯಿಂದಲೇ ಹೊರತು ಇತರ ಯಾವುದೇ ಉದ್ದೇಶದಿಂದ ಅಲ್ಲ . ಹೀಗಾಗಿ ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ಧರ್ಮಸಿಂಗ್ ವಿರುದ್ಧದ ಆರೋಪಗಳನ್ನು ಕೈಬಿಡಿ" ಎಂದು ರಾಮೇಶ್ವರ ಠಾಕೂರ್ ಲೋಕಾಯುಕ್ತರಿಗೆ ಆದೇಶ ನೀಡಿದ್ದಾರೆನ್ನಲಾಗಿದೆ.
ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಕುರಿತ ತಮ್ಮ ವರದಿಯನ್ನು 2008ರ ಡಿಸೆಂಬರ್ 18ರಂದು ಸರ್ಕಾರ ಮತ್ತು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಈ ವರದಿಯಲ್ಲಿ "ಧರ್ಮಸಿಂಗ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡಿದ್ದು, ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 23 ಕೋಟಿ ರೂಪಾಯಿ ನಷ್ಟವಾಗಿದೆ" ಎಂದು ಹೇಳಿದ್ದರು.
ಈ ವರದಿಯನ್ನು ಪರಿಶೀಲಿಸಿದ ಠಾಕೂರ್ ಲೋಕಾಯುಕ್ತರಿಗೆ ಪತ್ರಬರೆದು ಧರಂ ವಿರುದ್ಧ ಪ್ರಕರಣ ಕೈಬಿಡುವಂತೆ ಆದೇಶಿಸಿದ್ದು, ಇದರ ಹೊರತಾಗಿ ವರದಿಯ ಉಳಿದ ಅಂಶಗಳನ್ನು ತಾನು ಒಪ್ಪುವುದಾಗಿ ಹೇಳಿದ್ದಾರೆ. ಧರ್ಮಸಿಂಗ್ ಅವರು ರೈತರ ಹಿತದೃಷ್ಟಿಯಿಂದ ಪಟ್ಟಾಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದರು. ಈ ವಿಷಯದಲ್ಲಿ ಅವರ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ ಎಂಬುದು ನಿಮ್ಮ ವರದಿಯಲ್ಲೇ ಇದೆ. ಆದ್ದರಿಂದ ಅವರ ವಿರುದ್ಧದ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಠಾಕೂರ್ ಆದೇಶದಲ್ಲಿ ಹೇಳಲಾಗಿದೆ.
ಠಾಕೂರ್ ಅವರು ವರ್ಗವಾಗಿ ಜೂನ್ 29ರಂದು ಮಧ್ಯಪ್ರದೇಶಕ್ಕೆ ತೆರಳಿದ್ದಾರೆ. ಅವರು ಜೂನ್ 23ರಂದು ಈ ಪತ್ರವನ್ನು ಬರೆದಿದ್ದಾರೆ. ಈ ಪತ್ರವನ್ನು ರಾಜಭವನದ ಅಧಿಕಾರಿಗಳು ಜುಲೈ ಆರರಂದು ಲೋಕಾಯುಕ್ತರಿಗೆ ತಲುಪಿಸಿದ್ದಾರೆ.
ಪತ್ರದ ವಿಳಂಬಿತ ವಿಲೇವಾರಿಗೆ ಲಿಖಿತ ವಿವರಣೆಯನ್ನೂ ನೀಡಿದ್ದಾರೆ. "ರಾಜ್ಯಪಾಲರು ಜೂನ್ 23ರಂದೇ ಪತ್ರಬರೆದಿದ್ದರು. ಆದರೆ ಕಾರಣಾಂತರಗಳಿಂದ ಅದನ್ನು ನಿಮಗೆ ತಲುಪಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತಡವಾಗಿ ತಲುಪಿಸುತ್ತಿತ್ತೇವೆ" ಎಂಬುದಾಗಿ ವಿವರಣೆಯಲ್ಲಿ ಹೇಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯಪಾಲರ ಅಧಿಕೃತ ಪತ್ರವನ್ನು ಗೌಪ್ಯ ಎಂದು ಸೂಚಿಸಲಾಗಿದೆ. ಅಲ್ಲದೆ ಈ ವಿಚಾರವನ್ನು ರಹಸ್ಯವಾಗಿ ಇರಿಸುವಂತೆಯೂ ಹೇಳಲಾಗಿದೆಯೆನ್ನಲಾಗಿದೆ. |