ತಮಿಳುನಾಡಿನ ವಿವಾದಾತ್ಮಕ ಹೊಗೇನಕಲ್ ಯೋಜನೆಯು ಕರ್ನಾಟಕ ಜೊತೆಗಿನ ಸಂಬಂಧಕ್ಕೆ ಯಾವುದೇ ಧಕ್ಕೆಯುಂಟು ಮಾಡದು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಮಿಳು ಸಂತ ತಿರುವಳ್ಳುವರ್ ಪ್ರತಿಮೆಯನ್ನು ಆಗಸ್ಟ್ 9ರಂದು ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಗುತ್ತದೆ, ಆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತಮಿಳರ ಸುದೀರ್ಘ ಕಾಲದ ಬೇಡಿಕೆ ಇದಾಗಿತ್ತು. ಇದಕ್ಕೆ ಪೂರಕವಾಗಿ, ತಮಿಳುನಾಡು ಸರಕಾರವು ಕನ್ನಡದ ಕವಿ ಸರ್ವಜ್ಞನ ಪ್ರತಿಮೆಯನ್ನು ಆಗಸ್ಟ್ 13ರಂದು ಚೆನ್ನೈಯಲ್ಲಿ ಅನಾವರಣಗೊಳಿಸಲಿದ್ದು, ಆ ಕಾರ್ಯಕ್ರಮದಲ್ಲಿ ತಾನೂ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡುತ್ತಿದ್ದ ಅವರು, ಹೊಗೇನಕಲ್‌ನಲ್ಲಿ ತಮಿಳುನಾಡು ಸರಕಾರವು 1334 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆ ಕುರಿತಾಗಿ ಇರುವ ವಿವಾದವು ಉಭಯ ರಾಜ್ಯಗಳಿಗೂ ಸಮ್ಮತವಾಗುವ ರೀತಿಯಲ್ಲಿ ಪರಿಹಾರ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
2012ರಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಮಿಳುನಾಡು ಘೋಷಿಸಿದ್ದರೆ, ಈ ಯೋಜನೆಗೆ ಕಾವೇರಿಯ ನೀರು ಬಳಕೆಯಾಗುವುದರಿಂದ ಇದನ್ನು ಕರ್ನಾಟಕ ವಿರೋಧಿಸುತ್ತಲೇ ಬಂದಿತ್ತು. |