ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಿವಿಂಕ್ ಸಂಸ್ಥೆಯ ಶ್ರೀನಿವಾಸ್ ಶಾಸ್ತ್ರೀಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಹೆಚ್ಚಿನ ಬಡ್ಡಿ ಹಣದ ಆಮಿಷವೊಡ್ಡಿ ಸಾವಿರಾರು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪದ ಮೇಲೆ ಬಂಧಿತನಾಗಿದ್ದ ಶ್ರೀನಿವಾಸ್ ಶಾಸ್ತ್ರೀ ಆಲಿಯಾಸ್ ವಿನಿವಿಂಕ್ ಶಾಸ್ತ್ರೀಗೆ 50 ಸಾವಿರ ರೂ.ಗಳ ವೈಯಕ್ತಿಕ ಮುಚ್ಚಳಿಕೆಯ ಆಧಾರದ ಮೇಲೆ ಸುಪ್ರೀಂಕೋರ್ಟ್ 2 ತಿಂಗಳ ಜಾಮೀನು ನೀಡಿದೆ.
ವಿನಿವಿಂಕ್ ಶಾಸ್ತ್ರೀಗೆ ಜಾಮೀನು ನೀಡಿರುವುದರಿಂದ ಠೇವಣಿದಾರರ ಹಣ ಹಿಂತಿರುಗಿಸುವ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ ಎಂದು ಅವರ ಪರ ವಕೀಲ ಶಂಕರಪ್ಪ ತಿಳಿಸಿದ್ದಾರೆ.
ಶ್ರೀನಿವಾಸ್ ಶಾಸ್ತ್ರೀ ವಂಚಿಸಿದ್ದಾನೆ ಎಂದು ಹೇಳಲಾದ 205 ಕೋಟಿ ರೂ. ಪೈಕಿ 175 ಕೋಟಿ ರೂ. ಈಗಾಗಲೇ ಮರು ಪಾವತಿಯಾಗಿದೆ. 10 ಕೋಟಿ ರೂ. ಪೊಲೀಸರ ವಶದಲ್ಲಿದೆ. ಶಾಸ್ತ್ರೀ ಹೆಸರಿನಲ್ಲಿ 400 ಕೋಟಿ ರೂ. ಮೊತ್ತದ ಆಸ್ತಿ ಇದೆ. ಈ ಆಸ್ತಿ ಮಾರಿ ಠೇವಣಿದಾರರಿಗೆ ಹಣ ವಾಪಸ್ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
2005-06ನೇ ಸಾಲಿನಲ್ಲಿ ತನ್ನ ಸಾವಿರಾರು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ವಿನಿವಿಂಕ್ ಹಣಕಾಸು ಸಂಸ್ಥೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಈ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್ ಶಾಸ್ತ್ರೀಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಜಾಮೀನು ನೀಡಿದೆ. |