ಮೈಸೂರು ಕೋಮುಗಲಭೆಯ ಹಿಂದೆ ಕೆಎಫ್‌ಡಿ, ಪಿಎಫ್‌ಐ ಸಂಘಟನೆಯ ಕೈವಾಡ ಇಲ್ಲ ಎಂದು ಪ್ರತಿಪಾದಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಗಲಭೆಗೆ ಶ್ರೀರಾಮಸೇನೆ ಹಾಗೂ ಬಜರಂಗದಳವೇ ಕಾರಣ ಎಂದು ಆರೋಪಿಸಿದ್ದಾರೆ.ಮಂಗಳವಾರ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಮುಕ್ತಾಯಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮುದಳ್ಳುರಿ ಪ್ರಕರಣ ಕುರಿತಂತೆ ಸಂಘ ಪರಿವಾರದ ವಿರುದ್ಧ ಕಿಡಿಕಾರಿದರು.ಕೋಮುಗಲಭೆಯ ಹಿಂದೆ ಶ್ರೀರಾಮಸೇನೆ ಮತ್ತು ಬಜರಂಗದಳದ ಕೈವಾಡ ಇದೆ ಎಂದು ದೂರಿದರು. ಆ ನಿಟ್ಟಿನಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.ಅಲ್ಲದೇ ಗಲಭೆಗೆ ಕಾರಣರಾದವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೈಸೂರು ಗಲಭೆ ಹಿಂದೆ ಕೆಎಫ್‌ಡಿ ಮತ್ತು ಪಿಎಫ್‌ಐ ಇದೆ ಎಂದು ರಾಜಕೀಯ ಪ್ರೇರಿತವಾಗಿ ಆರೋಪಿಸಲಾಗುತ್ತಿದೆ. ಆ ಎರಡೂ ಸಂಘಟನೆಗಳು ಗಲಭೆಗೆ ಕಾರಣವಲ್ಲ ಎಂದು ಹೇಳಿದರು.ಮೈಸೂರು ಗಲಭೆಗೆ ಸಂಘಪರಿವಾರವೇ ಕಾರಣ ಎಂದು ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಆರೋಪಿಸಿದ್ದರು. ಗಲಭೆ ಹಿಂದೆ ಕೆಎಫ್‌ಡಿ ಕೈವಾಡ ಇದ್ದು ಆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡರು, ಸಂಘ ಪರಿವಾರದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಗುಡುಗಿದ್ದರು. |