ಕೆಲವರಿಗೆ ಮೂಗಿನ ಮೇಲೆ ಕೋಪ, ಹಾಗೇ ಏಕಾಏಕಿ ದುಡುಕಿ ಕೋಪದಿಂದ ಮಾಡುವ ಕೆಲಸ ಎಷ್ಟು ಅನಾಹುತಕ್ಕೆ ಕಾರಣವಾಗುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 'ಅಪರಿಚಿತ ಮಗುವೊಂದು ಮನೆಯೊಳಕ್ಕೆ ಬಂದು ಟೇಬಲ್ ಮೇಲಿದ್ದ ಮೊಬೈಲ್ ಅನ್ನು ಎತ್ತಿಕೊಂಡಾಗ ಸಿಟ್ಟಿನಿಂದ ಕಪಾಳಕ್ಕೆ ಹೊಡೆದ ಏಟಿಗೆ ಮಗುವಿನ ಉಸಿರು ನಿಂತು ಹೋಗಿತ್ತು. ಬಳಿಕ ಭಯದಿಂದ ಮಗುವಿನ ಶವವನ್ನು ಸಮೀಪದ ನೀಲಗಿರಿ ತೋಪಿಗೆ ಎಸೆದಿದ್ದೆ.'
ಹೀಗೆ ಪೊಲೀಸರಿಗೆ ತಾನು ಮಾಡಿದ ಕೊಲೆಯನ್ನು ನಿವೇದಿಸಿಕೊಂಡು ತಪ್ಪೊಪ್ಪಿಕೊಂಡು ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಂದ ಬಂಧಿತನಾದ ವ್ಯಕ್ತಿ ನಾಗೇಶ್ (30ವ).
ಕಳೆದ ಶುಕ್ರವಾರ ದೊಡ್ಡಕನ್ನಹಳ್ಳಿ ನಿವಾಸಿ ಗಾರ್ಮೆಟ್ ಉದ್ಯೋಗಿ ಅಮಲ ಎಂಬುವರು ಪುತ್ರ ಎಲ್‌ಕೆಜಿ ವಿದ್ಯಾರ್ಥಿ ಸತೀಶ್(6) ನಾಪತ್ತೆಯಾಗಿರುವುದಾಗಿ ಗುರುವಾರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಏಕಾಏಕಿ ಮಗು ಕಾಣೆಯಾಗಿದ್ದರಿಂದ ತಾಯಿ ಆತಂಕಕ್ಕೆ ಒಳಗಾಗಿದ್ದರು.
ಕುತೂಹಲದ ವಿಷಯ ಏನೆಂದರೆ, ನೆರೆ ಮನೆಯ ಮಗುವೊಂದು ತನ್ನ ಮನೆಗೆ ಬಂದು ಮೊಬೈಲ್ ಕಿತ್ತುಹಾಕುತ್ತಿತ್ತು. ಆಗ ತಾನೇ ನಿದ್ದೆಯಿಂದ ಎಚ್ಚೆತ್ತಿದ್ದ ನಾನು ಸಿಟ್ಟಿನಿಂದ ಮಗುವಿನ ಕೆನ್ನೆಗೆ ಹೊಡೆದಿದ್ದೆ. ಹೊಡೆದ ರಭಸಕ್ಕೆ ಮಗು ಸ್ಥಳದಲ್ಲೇ ಸತ್ತುಹೋಗಿತ್ತು. ಆಗ ಭಯದಿಂದ ಮಗುವನ್ನು ಟವೆಲ್‌ವೊಂದರಲ್ಲಿ ಸುತ್ತಿ ನೀಲಗಿರಿ ತೋಪಿನಲ್ಲಿ ಎಸೆದಿದ್ದೆ ಎಂದು ನಾಗೇಶ್ ಮಹಾಶಯ ತಾನು ಮಾಡಿದ ಕೊಲೆ ಕೃತ್ಯವನ್ನು ಮಧು ಎಂಬುವರ ಬಳಿ ಬಾಯ್ಬಿಟ್ಟಿದ್ದ. ನಂತರ ನೀಲಗಿರಿ ತೋಪಿನಲ್ಲಿ ಮಗುವಿನ ಶವ ಸಿಕ್ಕಿತ್ತು. ಮಗು ಕಾಣೆಯಾದ ಬಗ್ಗೆ ದೂರು ದಾಖಲಾಗಿರುವುದಕ್ಕೂ, ಈತ ಮಾಡಿದ ಕೊಲೆ ವಿಷಯ ಬಾಯ್ಬಿಟ್ಟ ನಂತರ ಪೊಲೀಸರು ನಾಗೇಶ್‌ನನ್ನು ಭಾನುವಾರ ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿ ಇರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |