ನಿಲುವಳಿ ಸೂಚನೆಯನ್ನು ಎಲ್ಲಾ ಕಲಾಪಗಳನ್ನು ಬದಿಗೊತ್ತಿ ಆರಂಭದಲ್ಲೇ ಕೈಗೆತ್ತಿಕೊಳ್ಳಬೇಕೇ ಬೇಡವೇ ಎನ್ನುವ ವಿಚಾರ ವಿಧಾನಸೌಧದಲ್ಲಿ ಮಂಗಳವಾರ ನಡೆದ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ವಾದಗಳಿಗೆ ಎಡೆಮಾಡಿಕೊಟ್ಟಿತು.
ಮಂಗಳವಾರ ಸದನ ಆರಂಭವಾಗುತ್ತಿದ್ದಂತೆ ಜೆಡಿಎಸ್‌ನ ರೇವಣ್ಣನವರು ಗೃಹ ಮಂಡಳಿಯಲ್ಲಿ ನಡೆದಿರುವ ಭೂ ಹಗರಣದ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾಪಕ್ಕೆ ಮುಂದಾದರು.
ಈ ಹಂತದಲ್ಲಿ ಎದ್ದು ನಿಂತ ಮುಖ್ಯಮಂತ್ರಿ ಯಡಿಯೂರಪ್ಪ ಸದನ ನಡೆಸುವುದಕ್ಕೆ ತನ್ನದೇ ಆದ ನೀತಿ ನಿಯಮಗಳಿವೆ. ಸಂಸತ್‌ನಲ್ಲೂ ಪ್ರಶ್ನೋತ್ತರದ ನಂತರವೇ ಉಳಿದ ಸೂಚನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ ಈ ಸದನದಲ್ಲಿ ಪ್ರತಿಪಕ್ಷಗಳು ಪ್ರತಿನಿತ್ಯ ನಿಲುವಳಿ ಸೂಚನೆಯನ್ನು ತಂದು ಪ್ರಶ್ನೋತ್ತರ ಕಲಾಪ ಮುಂದೂಡಿ ಎಂದು ಹೇಳುತ್ತಿದ್ದಾರೆ. ಪ್ರಶ್ನೋತ್ತರ ಮುಂದೂಡಿ ನಿಲುವಳಿ ಸೂಚನೆಗೆ ಅವಕಾಶ ಕೊಡುವುದು ಸರಿಯೇ ಎಂದು ನೀವೇ ತೀರ್ಮಾನ ಮಾಡಿ ಎಂದು ಸಭಾಧ್ಯಕ್ಷರಲ್ಲಿ ಹೇಳಿದರು.
ಈ ರೀತಿ ಪ್ರಶ್ನೋತ್ತರವನ್ನು ಮುಂದೂಡಿ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಕ್ಕೆ ಮುಂದಾಗಿ ಹೊಸ ಸಂಪ್ರದಾಯ ಹಾಕುವುದು ಸರಿಯಲ್ಲ. ಈ ರೀತಿ ಸದನ ನಡೆದರೆ ಇದಕ್ಕೆ ಅರ್ಥ ಇದೆಯೇ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಮಾತಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ 25ವರ್ಷಗಳ ಅನುಭವದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಮೊದಲು ಅವಕಾಶ ನೀಡುವುದನ್ನು ನೋಡಿದ್ದೇನೆ. ನಿಯಮಗಳಲ್ಲೂ ಅದೇ ರೀತಿ ಇದೆ. ಹಾಗಾಗಿ ವಿಷಯ ಪ್ರಸ್ತಾಪಕ್ಕೆ ಅನುಮತಿ ನೀಡಲೇಬೇಕು. ಅದಕ್ಕೆ ಅಡ್ಡಿ ಮಾಡುವುದು ಸರಿಯಲ್ಲ, ಸದಸ್ಯರ ಹಕ್ಕನ್ನು ಮೊಟಕು ಮಾಡಬಾರದು ಎಂದರು.
ಚರ್ಚೆಯಿಂದಾಗಿ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ನಂತರ ಚರ್ಚೆ ಬೇಡ ಎಂದು ಹೇಳಿಲ್ಲ, ಆದರೆ ಪ್ರಶ್ನೋತ್ತರದ ನಂತರ ಚರ್ಚೆ ಮಾಡೋಣ ಸಹಕರಿಸಿ ಎಂದು ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಪದೇ ಪದೇ ಮನವಿ ಮಾಡಿದಾಗ ಸದಸ್ಯರು ಅದನ್ನು ಒಪ್ಪಿ ಮುಂದಿನ ಕಾರ್ಯಕಲಾಪಗಳಿಗೆ ಅವಕಾಶ ನೀಡಿದರು. |