ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಉಗ್ರರ ಬೆದರಿಕೆಯ ನಡುವೆ ಮಠಾಧೀಶರಿಗೂ ಬೆದರಿಕೆ ಕರೆ ಬರುತ್ತಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಪೇಜಾವರ ಮಠದ ಶ್ರೀವಿಶ್ವೇಶ್ವರತೀರ್ಥ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ರಾಜ್ಯದ 11 ಮಂದಿ ಮಠಾಧೀಶರಿಗೆ ರಾಜ್ಯ ಸರ್ಕಾರ ಭದ್ರತೆ ಒದಗಿಸಿದೆ.ಸ್ವಾಮೀಜಿಗಳಿಗೆ ವಿವಿಧ ರೀತಿಯ ಬೆದರಿಕೆಗಳಿದ್ದು, ಬೆದರಿಕೆಯ ಸ್ವರೂಪ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸ್ವಾಮೀಜಿಗಳಿಗೆ ಭದ್ರತೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ ವಾರ್ಷಿಕ 54.67ಲಕ್ಷ ರೂ.ವ್ಯಯಿಸುತ್ತಿದೆ.ಜೆಡಿಎಸ್‌ನ ಎಸ್.ಬಸವರಾಜನ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹಸಚಿವ ವಿ.ಎಸ್.ಆಚಾರ್ಯ ಮಂಗಳವಾರ ಸದನದಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿವರ ನೀಡಿದ್ದಾರೆ.ಈ ಸ್ವಾಮೀಜಿಗಳಿಗೆ ತಗಲುವ ಖರ್ಚನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇದೇ ವೇಳೆ ರಾಜ್ಯದಲ್ಲಿ ಕೆಲವು ಖಾಸಗಿ ವ್ಯಕ್ತಿಗಳಿಗೂ ಭದ್ರತೆ ನೀಡಲಾಗುತ್ತಿದ್ದು, ಅದರ ವೆಚ್ಚವನ್ನು ಖಾಸಗಿ ವ್ಯಕ್ತಿಗಳೇ ಭರಿಸುತ್ತಿದ್ದಾರೆ.ರಾಜ್ಯ ಸರ್ಕಾರ ಬೆಂಗಳೂರಿನ ನಿಡುಮಾಮಿಡಿ ಮಠದ ಶ್ರೀವೀರಭದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಎಸ್.ಎಸ್.ಮುರುಘರಾಜೇಂದ್ರ ಸ್ವಾಮೀಜಿ, ಶೃಂಗೇರಿ ಮಠದ ಭಾರತೀತೀರ್ಥ ಸ್ವಾಮೀಜಿ, ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮುರುಘಾಮಠದ ಡಾ.ಶಿವಮೂರ್ತಿ ಮುರುಘ ಶರಣರು, ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಸುಜ್ಞೇಂದ್ರ ತೀರ್ಥ ಸ್ವಾಮೀಜಿಗಳಿಗೆ ಭದ್ರತೆ ಒದಗಿಸಿದೆ. |