ರೈತರ ಏಳಿಗೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಲಮನ್ನಾ, ಕಡಿಮೆ ಬಡ್ಡಿದರದಲ್ಲಿ ಸಾಲ ಯೋಜನೆಗಳನ್ನು ಘೋಷಿಸಿರುವ ನಡುವೆಯೂ ರಾಜ್ಯದಲ್ಲಿ ಸರಾಸರಿ ಪ್ರತಿ ಎರಡು ದಿನಕ್ಕೆ ಒಬ್ಬರಂತೆ ರೈತರು ಆತ್ಮಹತ್ಯೆ ಶರಣಾಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಅಧಿಕೃತ ಅಂಕಿ-ಅಂಶ ನೀಡಿದೆ.
2008ರ ಜನವರಿಯಿಂದ 2009 ಜೂನ್ 30ರವರೆಗೆ ಬೆಳೆನಷ್ಟ ಮತ್ತಿತರ ಕಾರಣಗಳಿಗಾಗಿ ಸಾವಿಗೆ ಶರಣಾದ ರೈತರ ಸಂಖ್ಯೆ 266, ಇದು ರಾಜ್ಯ ಸರ್ಕಾರ ಅಧಿಕೃತವಾಗಿ ನೀಡಿರುವ ಅಂಕಿ-ಅಂಶ. ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಮಂಗಳವಾರ ಸದನದಲ್ಲಿ ನೀಡಿರುವ ಮಾಹಿತಿ ಪ್ರಕಾರ, ಚಿಕ್ಕಬಳ್ಳಾಪುರ ರೈತ ಆತ್ಮಹತ್ಯೆ ಮುಕ್ತ ಜಿಲ್ಲೆ ಎನಿಸಿಕೊಂಡಿದೆ. ಚಾಮರಾಜನಗರ, ದಾವಣಗೆರೆ, ಉಡುಪಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರಿಸ್ಥಿತಿ ಪರವಾಗಿಲ್ಲ, ಇಲ್ಲಿ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ತಲಾ ಒಂದು. ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ (31ಮಂದಿ) ಮಾಡಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಗುಲ್ಬರ್ಗಾ 30 ರೈತರು, ಚಿಕ್ಕಮಗಳೂರಿನಲ್ಲಿ 28ರೈತರು, ಹಾಸನದಲ್ಲಿ 25, ಬೆಳಗಾವಿಯಲ್ಲಿ 16, ಬಿಜಾಪುರ ಮತ್ತು ಚಿತ್ರದುರ್ಗದಲ್ಲಿ ತಲಾ 15, ತುಮಕೂರು ಮತ್ತು ಕೊಡಗಿನಲ್ಲಿ ತಲಾ 11 ಹಾಗೂ ಬಳ್ಳಾರಿಯಲ್ಲಿ 10 ಮಂದಿ ಸಾವಿಗೆ ಶರಣಾಗಿದ್ದಾರೆ. |