ಸರ್ಕಾರದ ಕ್ರಮದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಬಗ್ಗೆ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸುವ ಮೂಲಕ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ನಡುವಿನ ಸಮರ ಮತ್ತೆ ಮುಂದುವರಿದಂತಾಗಿದೆ.
ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಮೇಲೆ ಸಂತೋಷ್ ಹೆಗ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರ ತಮ್ಮ ವರದಿಯ ಶಿಫಾರಸುಗಳನ್ನು ಜಾರಿಗೆ ತರುತ್ತಿಲ್ಲವೆಂದು ಹೇಳಿದ್ದರು. ಇದು ಈಗ ಸರ್ಕಾರದ ಮಟ್ಟದಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಸರ್ಕಾರ ವರದಿಯ ಶಿಫಾರಸು ಜಾರಿಗೆ ತರಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೂ ಲೋಕಾಯುಕ್ತರು ಈ ರೀತಿ ಬಹಿರಂಗವಾಗಿ ಸರ್ಕಾರದ ಮೇಲೆ ತಪ್ಪು ಅಭಿಪ್ರಾಯ ವ್ಯಕ್ತವಾಗುವಂತೆ ಮಾಡುವ ಅಗತ್ಯವಿತ್ತೇ ಎಂಬುದು ಸರ್ಕಾರದ ಪ್ರಶ್ನೆ. ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಶಿಫಾರಸು ಮಾಡಬಹುದೇ ಹೊರತು ಒತ್ತಡ ತರುವಂತಿಲ್ಲ ಎಂಬುದು ಸರ್ಕಾರದ ವಾದ.
ಸರ್ಕಾರದ ಮೇಲೂ ಒತ್ತಡಗಳಿರುತ್ತದೆ ಎಂಬುದನ್ನು ಲೋಕಾಯುಕ್ತರು ಅರಿತುಕೊಳ್ಳಬೇಕು. ಎಲ್ಲಾ ಶಿಫಾರಸುಗಳನ್ನು ಒಮ್ಮೆಲೆ ಜಾರಿಗೆ ತರುವುದು ಕಷ್ಟದ ಕೆಲಸ. ಆದರೂ ಹಿಂದೆ ಯಾವುದೇ ಸರ್ಕಾರ ಇಷ್ಟು ತುರ್ತಾಗಿ ವರದಿ ಮೇಲೆ ಕ್ರಮ ಕೈಗೊಂಡಿಲ್ಲ ಎಂಬ ಅಭಿಪ್ರಾಯ ಸರ್ಕಾರದ್ದಾಗಿದೆ. |