ವಸತಿ ಹಗರಣ ಬುಧವಾರವೂ ಕೂಡ ವಿಧಾನಸಭೆ ಕಲಾಪದಲ್ಲಿ ಮತ್ತೆ ಪ್ರತಿಧ್ವನಿಸುವ ಮೂಲಕ ಸಾಕಷ್ಟು ವಾಗ್ವಾದಗಳಿಗೆ ಕಾರಣವಾಯಿತಲ್ಲದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದ ಪರಿಣಾಮ ಕಲಾಪವನ್ನು ಸಭಾಧ್ಯಕ್ಷರು ಕೆಲಕಾಲ ಮುಂದೂಡಿದರು.
ಬುಧವಾರ ಬೆಳಿಗ್ಗೆ ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ, ವಸತಿ ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಜೆಡಿಎಸ್ ಸದಸ್ಯರು ಆಗ್ರಹಿಸುತ್ತಿದ್ದಂತೆಯೇ ಮುಖ್ಯಮಂತ್ರಿಗಳು ಬೇಡಿಕೆಯನ್ನು ತಳ್ಳಿಹಾಕಿದಾಗ ಗೊಂದಲಕ್ಕೆ ಕಾರಣವಾಯಿತು.
ತದನಂತರ ಜೆಡಿಎಸ್ ಸದಸ್ಯರು ಸದನದ ಬಾವಿಗಳಿದು ಧರಣಿ ನಡೆಸುತ್ತಿದ್ದಂತೆಯೇ, ಕಾಂಗ್ರೆಸ್ ಶಾಸಕರೂ ಕೂಡ ಜೆಡಿಎಸ್ ಶಾಸಕರಿಗೆ ಸಾಥ್ ನೀಡಿ, ವಸತಿ ಇಲಾಖೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಕಲಾಪಕ್ಕೆ ಅಡ್ಡಿಪಡಿಸದಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಲಾಪವನ್ನು ಕೆಲಕಾಲ ಮುಂದೂಡಿದರು.
ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಹಣ ಪಾವತಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಬಳಿ ಕರ್ನಾಟಕ ಗೃಹಮಂಡಳಿ ನಡೆಸಿದ 956ಎಕರೆ ಭೂ ಸ್ವಾಧೀನ ಹಗರಣ ಸೇರಿದಂತೆ ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯಾದ್ಯಂತ ಕೆಎಚ್‌ಬಿ (ಕರ್ನಾಟಕ ಹೌಸಿಂಗ್ ಬೋರ್ಡ್) ನಡೆಸಿರುವ ಎಲ್ಲ ಭೂ ಖರೀದಿ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕೆಂದು ಮಂಗಳವಾರ ಸದನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ವಿಷಯ ಪ್ರಸ್ತಾಪಿಸಿ, ಒತ್ತಾಯ ಹೇರಿದ್ದರು.
ಈ ವಿಷಯವನ್ನು ನಿನ್ನೆ ರೇವಣ್ಣ ಸದನದಲ್ಲಿ ಪ್ರಸ್ತಾಪಿಸಿದಾಗ ಒಂದು ಹಂತದಲ್ಲಿ ಮುಖ್ಯಮಂತ್ರಿಗಳು ತಾಳ್ಮೆ ಕಳೆದುಕೊಂಡು ಕೂಗಾಡಿದ ಪರಿಣಾಮ ಕಲಾಪ ಗೊಂದಲದ ಗೂಡಾಗಿತ್ತು. ವಿವಾದಕ್ಕೆ ಗುರಿಯಾಗಿರುವ ಕೆಎಚ್‌ಬಿ ಭೂ ಸ್ವಾಧೀನ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಳ್ಳಿಹಾಕಿ, ಉನ್ನತ ಮಟ್ಟದ ತನಿಖೆಗೆ ಒಪ್ಪಿಸಿದ್ದರು. |