ರಾಜ್ಯದಲ್ಲಿ ಗೋಹತ್ಯೆ ವಿವಾದ ಸಾಕಷ್ಟು ಕೋಮುಗಲಭೆ, ಅಮಾಯಕರ ಸಾವಿಗೆ ಕಾರಣವಾಗಿತ್ತು. ತನ್ಮಧ್ಯೆ ಗೋಹತ್ಯೆ ನಿಷೇಧ ಬೇಕು;ಬೇಡ ಎಂಬ ಚರ್ಚೆ ಮುಂದುವರಿದಿರುವ ನಡುವೆಯೇ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಸ್ವತಃ ಮುಸ್ಲಿಂ ರಾಷ್ಟ್ರೀಯ ಮಂಚ್ ಮತ್ತು ಕರ್ನಾಟಕ ಮುಸ್ಲಿಂ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಆ ನಿಟ್ಟಿನಲ್ಲಿ ಗೋ ಹತ್ಯೆ ಮಾಡುವವರು, ಕಸಾಯಿಖಾನೆ ನಡೆಸುವವರು ಮುಸ್ಲಿಮರು, ಕೋಮುಗಲಭೆಗೆ ಮೂಲ ಕಾರಣವೇ ಮುಸ್ಲಿಮರು ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದವರಿಗೆ ಇದೀಗ ಮುಸ್ಲಿಂ ಸಂಘಟನೆಗಳೇ ಗೋ ಹತ್ಯೆ ನಿಷೇಧ ಜಾರಿಗೆ ತನ್ನಿ ಎಂಬ ಒತ್ತಡ ಹೇರುವ ಮೂಲಕ ವಿವಾದಗಳಿಗೆ ಅಂತ್ಯಹಾಡಲು ಮುಂದಾದಂತಾಗಿದೆ.
ಗೋಹತ್ಯೆ ಕಾಯ್ದೆ ಜತೆಗೆ ಗೋಸಂರಕ್ಷಣೆ ಆಯೋಗವನ್ನು ಜಾರಿಗೆ ತ೦ದು ಗೋಹತ್ಯೆ ಮಾಡಿದವರಿಗೆ ಶಿಕ್ಷೆಯ ಪ್ರಮಾಣದ ಸ್ವರೂಪ ಬದಲಿಸಿ ಕಠಿಣ ಶಿಕ್ಷೆ ವಿಧಿಸಬೇಕೆ೦ದು ಕರ್ನಾಟಕ ಮುಸ್ಲಿ೦ ಸಂಘಟನೆಗಳ ಒಕ್ಕೂಟದ ಮುಖ೦ಡ ಮಹಮ್ಮದ್ ಉಸ್ಮಾನ್ ಆಲಿ ಇಲಿಯಾಜ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಆಗ್ರಹಿಸಿದ್ದಾರೆ.
ಈಗಾಗಲೇ ಗುಜರಾತ್ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತ೦ದಿರುವುದನ್ನು ಸುಪ್ರೀ೦ಕೋರ್ಟ್ ಎತ್ತಿ ಹಿಡಿದಿದೆ. ಇದೇ ರೀತಿ ರಾಜ್ಯ ಸರ್ಕಾರ ಕೂಡ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕೆ೦ದು ಒತ್ತಾಯಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಕ್ಕೆ ಮುಸ್ಲಿ೦ರ ವಿರೋಧವಿಲ್ಲ. ಕೆಲ ರಾಜಕೀಯ ಪಕ್ಷಗಳು ಮತ ಬ್ಯಾ೦ಕಿಗಾಗಿ ಮುಸ್ಲಿ೦ರು ಇದನ್ನು ವಿರೋಧಿಸುತ್ತಿದ್ದಾರೆ ಎ೦ಬುವುದು ಸರಿಯಲ್ಲ ಎ೦ದು ರಾಜಕಾರಣಿಗಳ ವಿರುದ್ದ ಕಿಡಿಕಾರಿದರು. |